ನದಿ ತೀರದ ಜನರಿಗೆ ಪರಿಹಾರ ಭರವಸೆ ನೀಡಿದ ಸಂಸದ ಶ್ರೇಯಸ್ ಪಟೇಲ್

27_HSN_02
Published on

ಹಾಸನ: ಹಾಸನ ಜಿಲ್ಲಾದ್ಯಂತ ವಿಪರೀತ ಮಳೆ ಆಗುತ್ತಿರುವ ಪರಿಣಾಮ ಹೇಮಾವತಿ ಜಲಾಶಯದಿಂದ ನದಿಗೆ ನೀರು ಬಿಟ್ಟಿದ್ದು, ನದಿ ಪಾತ್ರದ ಅಕ್ಕಪಕ್ಕದಲ್ಲಿ ವಾಸವಾಗಿರುವ ಜನರನ್ನು ಶುಕ್ರವಾರ ಸಂಸದ ಶ್ರೇಯಸ್ ಪಟೇಲ್ ಸಂತ್ರಸ್ತರಿಗೆ ಸರ್ಕಾರದ ಸವಲತ್ತುಗಳನ್ನು ಕೊಡಿಸುವ ಭರವಸೆ ನೀಡಿದರು.

ನದಿ ಪಾತ್ರದ ಅಕ್ಕಪಕ್ಕದಲ್ಲಿ ವಾಸ ಮಾಡುತ್ತಿರುವ ಮೀನುಗಾರರು, ರೈತರಿಗೆ , ನಿರಾಶ್ರಿತರಿಗೆ ಅರಿವು ಮೂಡಿಸಿ ಸರ್ಕಾರದ ವತಿಯಿಂದ ಅವರಿಗೆ ಸಿಗಬೇಕಾದ ಸವಲತ್ತುಗಳನ್ನು ಸಕಾಲದಲ್ಲಿ ತಲುಪಿಸುವಂತೆ ಸ್ಥಳದಲ್ಲಿ ಹಾಜರಿದ್ದ ಹೊಳೆನರಸೀಪುರ ತಹಸೀಲ್ದಾರ್ ವೈ. ಎಂ. ರೇಣು ಕುಮಾರ್ ಅವರಿಗೆ ಸೂಚನೆ ನೀಡಿದರು.

ಹೊಳೆನರಸೀಪುರ ಪಟ್ಟಣಕ್ಕೆ ಸಮೀಪದ ಅರಕಲಗೂಡು ರಸ್ತೆ, ಬಲ ಭಾಗದಲ್ಲಿ ನಿತ್ಯ ರಸ್ತೆ ಬದಿಯಲ್ಲಿ ಮೀನು ಮಾರಾಟ ಮಾಡಿಕೊಂಡು ತಮ್ಮ ಬದುಕನ್ನು ಸಾಗಿಸುತ್ತಿರುವ ಮೀನುಗಾರರನ್ನು ಈಗಾಗಲೇ ಎಪಿಎಂಸಿ ಮಾರುಕಟ್ಟೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಆ ಸ್ಥಳಕ್ಕೆ ತೆರಳಿದ ಸಂಸದರು, ಅವರ ಯೋಗ ಕ್ಷೇಮ ವಿಚಾರಿಸಿದರು. ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳುವಂತೆ ಪೋಷಕರಿಗೆ ತಿಳಿಸಿದರು.

ಆಯತ್ ನಗರ ಸೇರಿದಂತೆ ನದಿಯಿಂದ ಹರಿಯುತ್ತಿರುವ ನೀರು ಅಕ್ಕ ಪಕ್ಕದ ಬಡಾವಣೆಗಳಿಗೆ ಹರಿಯುವ ಮುನ್ಸೂಚನೆ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಸುರಕ್ಷಿತ ಸ್ಥಳಕ್ಕೆ ತೆರಳಿ ತಮ್ಮನ್ನು ರಕ್ಷಿಸಿಕೊಳ್ಳುವಂತೆ ಸಂಸದರು ಸಲಹೆ ನೀಡಿದರು.

ಈ ವೇಳೆ ಪುರಸಭಾ ಮುಖ್ಯ ಅಧಿಕಾರಿ ಯು.ಎಂ. ಶಿವಶಂಕರ್ ಸೇರಿದಂತೆ ಹಲವರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net