

ಬಾಗಲಕೋಟೆ: ಇಂಟಲಿಜೆನ್ಸಿ ಬ್ಯುರೋನಲ್ಲಿ ಅಧಿಕಾರಿ ಇದ್ದೇನೆ ಎಂದು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದ ಯುಕವನೊಬ್ಬ ಇದೀಗ ರಬಕವಿ-ಬನಹಟ್ಟಿ ಪೊಲೀಸ್ ಬಲೆಯಲ್ಲಿ ಅಂದರ್ ಆಗಿರುವ ಘಟನೆ ನಡೆದಿದೆ.
ನಾವಲಗಿ ಗ್ರಾಮದ ಸಂತೋಷ್ ಲಕ್ಕಪ್ಪಗೋಳ ಎನ್ನುವ ಯುವಕನೇ ಪೊಲೀಸ್ ವಶಕ್ಕೆ ಬಿದ್ದಿರುವ ನಕಲಿ ಇಂಟಲಿಜೆನ್ಸಿ ಅಽಕಾರಿ.
ಊರಲ್ಲಿ ಹಾಗೂ ಕುಟುಂಬದಲ್ಲಿ ಗೌರವ ಹೆಚ್ಚಿಸಿಕೊಳ್ಳಲು ತಾನೊಬ್ಬ ಇಂಟಲಿಜೆನ್ಸಿ ಅಽಕಾರಿಯಂದು ಓಡಾಡುತ್ತಿದ್ದ. ನಕಲಿ ಐಡಿ ಕಾರ್ಡ್ ಹೊಂದಿದ್ದ ಈತ, ನಕಲಿ ಲೈಟರ್ ಹಾಗೂ ಕಟ್ಟಿದ್ದ ವಾಕಿಟಾಕಿ ಇಟ್ಟುಕೊಂಡು ಸುತ್ತಾಡುತ್ತಿದ್ದ. ರಬಕವಿ-ಬನಹಟ್ಟಿ ಚೆಕ್ ಪೋಸ್ಟ್ ನಲ್ಲಿ ಅನುಮಾನಗೊಂಡ ಪೊಲೀಸರು, ಸಂತೋಷ್ ಬಳಿ ಇದ್ದ ಐಡಿ ಕಾರ್ಡ್ ಪರಿಶೀಲಿಸಿದಾಗ ಅದು ನಕಲಿ ಎನ್ನುವುದು ಗೊತ್ತಾಗಿ, ವಿಚಾರಣೆಗೆ ಒಳಪಡಿಸಿದಾಗ ಆತನ ನಕಲಿ ಮುಖ ಹೊರಬಂದಿದೆ.
ಸಂತೋಷ್ ಲಕ್ಕಪ್ಪಗೋಳ ಅವರನ್ನು ವಶಕ್ಕೆ ಪಡೆದಿರುವ ರಬಕವಿ-ಬನಹಟ್ಟಿ ಪೊಲೀಸರು, ಆತನ ವಿರುದ್ದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ತಿಳಿಸಿದ್ದಾರೆ.