ದೈಹಿಕ, ಮಾನಸಿಕ ಆರೋಗ್ಯಕ್ಕೆ ಏರೋಬಿಕ್ಸ್ ಸಹಕಾರಿ

HUN-JUNE-18-6(MAHIAL COLLEGE PROGRAMME)
Published on

ಹುಣಸೂರು: ಏರೋಬಿಕ್ಸ್ ವ್ಯಾಯಾಮದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಮೈಸೂರಿನ ಟೆರೇಷಿಯನ್ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ, ಅಂತಾರಾಷ್ಟ್ರೀಯ ದೇಹದಾರ್ಢ್ಯ ಪಟು ಅಂತೋನಿ ಮೋಸೆಸ್ ಅಭಿಪ್ರಾಯಪಟ್ಟರು.


ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಶನಿವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಏರೋಬಿಕ್ಸ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ನಿತ್ಯ ವ್ಯಾಯಾಮ ಮಾಡುವುದರಿಂದ ಮನದಲ್ಲಿ ಉಲ್ಲಾಸ, ದೇಹದ ತೂಕವನ್ನು ಕಡಿಮೆಯಾಗುವ ಮೂಲಕ ಜೀವನದ ಉತ್ಸುಕತೆ ಹೆಚ್ಚುತ್ತದೆ. ಪ್ರತಿ ದಿನ ಒಂದು ಗಂಟೆ ನಿಯಮಿತವಾಗಿ ಏರೋಬಿಕ್ಸ್ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಹೃದಯ ಮತ್ತು ರಕ್ತನಾಳಗಳಲ್ಲಿ ಒತ್ತಡ ಕಡಿಮೆ ಆಗಿ ಆರೋಗ್ಯ ವೃದ್ಧಿಸುತ್ತದೆ. ಮೂಳೆ ಮತ್ತು ಮಾಂಸಖಂಡ, ಸ್ನಾಯುಗಳು ಶಕ್ತಿಯುತವಾಗುತ್ತವೆ. ಮೆದುಳು, ಹೃದಯದ ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಸಹಕಾರಿಯಾಗುತ್ತದೆ ಎಂದರು.


ಇಂದಿನ ಯುವ ಜನತೆ ಜಂಕ್‌ಫುಡ್‌ಗಳಿಂದಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಜಂಕ್‌ಫುಡ್ ಸೇವನೆ ದೇಹಕ್ಕೆ ಮಾರಕವಾಗುವುದರಿಂದ ಅವುಗಳನ್ನು ತ್ಯಜಿಸಿ ವಿದ್ಯಾರ್ಥಿಗಳು ಆರೋಗ್ಯದತ್ತ ಹೆಚ್ಚಿನ ಗಮನಹರಿಸಬೇಕು ಎಂದು ಕರೆ ನೀಡಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಕೆ.ಎಸ್.ಭಾಸ್ಕರ್, ವಿದ್ಯಾರ್ಥಿಗಳು ಹೆಚ್ಚು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಯೋಗ, ವ್ಯಾಯಾಮ ಹಾಗೂ ಇನ್ನಿತರ ಉತ್ತಮ ಹವ್ಯಾಸಗಳ ಮೂಲಕ ವಿದ್ಯಾರ್ಥಿಗಳು ಏಕಾಗ್ರತೆ ಹೆಚ್ಚಿಸಿಕೊಳ್ಳಬಹುದು ಎಂದು ಕಿವಿಮಾತು ಹೇಳಿದರು.

ಕಾಲೇಜಿನ ಪ್ರಾಂಶುಪಾಲ ಪುಟ್ಟಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಕ್ರೀಡಾ ಸಮಿತಿಯ ಸದಸ್ಯರಾದ ಡಾ.ಬೋಪಯ್ಯ, ಡಾ. ಎನ್.ಕರುಣಾಕರ್, ಡಾ.ಸಿ.ಎನ್.ಕಾವ್ಯಾ, ಡಾ. ಕೆ.ಪಿ.ಪ್ರಸನ್ನ, ರವಿ, ಕುಮಾರ್, ಟೆರಿಷಿಯನ್ ಕಾಲೇಜಿನ ವಿದ್ಯಾರ್ಥಿನಿಯರಾದ ಹಾರ್ಮೀನ್, ಚಂದನಾ, ಪ್ರಜ್ಞಾ ಭಾಗವಹಿಸಿದ್ದರು. 250ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿಗೆ ಒಂದು ಗಂಟೆಗಳ ಕಾಲ ಏರೋಬಿಕ್ಸ್ ವ್ಯಾಯಾಮ ಹೇಳಿಕೊಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net