

ಹಳಿಯಾಳ: ಪಟ್ಟಣದ ಅರ್ಬನ್ ಬ್ಯಾಂಕ್ ವೃತ್ತದಲ್ಲಿಯ ಅಂಜುಮನ್ ಎ ಇಸ್ಲಾಂ ದಿ. ಇಕ್ಬಾಲ್ ಎಜುಕೇಶನ್ ಸೊಸೈಟಿ ಕಚೇರಿಯ ಬಾಗಿಲಲ್ಲಿ ವಾಮಾಚಾರ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೊಸೈಟಿ ಮುಂದೆ ವಾಮಾಚಾರದ ವಸ್ತುಗಳು ಶನಿವಾರ ಬೆಳಗ್ಗೆ ಕಂಡುಬಂದಿವೆ. ಶುಕ್ರವಾರ ಅಮಾವಾಸ್ಯೆಯಂದು ರಾತ್ರಿ ವಾಮಾಚಾರ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಸೀರೆಗಳು, ಲಿಂಬೆ ಹಣ್ಣು, ದಾರ ಕಟ್ಟಿ ಸೂಜಿ ಚುಚ್ಚಿರುವುದು ಮತ್ತು ಕೆಲ ವಸ್ತುಗಳು ಕಂಡು ಬಂದಿವೆ. ಈ ಬಗ್ಗೆ ಠಾಣೆಗೆ ಮಾಹಿತಿ ನೀಡಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ ಎಂದು ಸೊಸೈಟಿ ಆಡಳಿತ ಅಧಿಕಾರಿ ಇಲಿಯಾಸ್ ಬಳಗಾರ ತಿಳಿಸಿದ್ದಾರೆ. ಅರ್ಬನ್ ಬ್ಯಾಂಕ್ ವೃತ್ತದಲ್ಲಿ ಸಿಸಿ ಟಿವಿ ಕ್ಯಾಮರಾ ಇಲ್ಲದಿರುವುದು ವಾಮಾಚಾರ ಮಾಡಲು ಅನುಕೂಲ ಮಾಡಿಕೊಟ್ಟಂತಾಗಿದೆ.