More

    ದಾವಣಗೆರೆ ಜಿಲ್ಲೆಯಲ್ಲಿ ಯಾರಿಗೆ ಒಲಿಯಲಿದೆ ಮಂತ್ರಿಗಿರಿ? ಶಾಮನೂರು- ಮಲ್ಲಣ್ಣ ಇಬ್ಬರಲ್ಲಿ ಒಬ್ಬರಿಗೆ ಅವಕಾಶ

    ಡಿ.ಎಂ.ಮಹೇಶ್ ದಾವಣಗೆರೆ: ರಾಜ್ಯದ ಮುಖ್ಯಮಂತ್ರಿ- ಉಪ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ- ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವ ದಿನ ನಿಕ್ಕಿಯಾಗಿದೆ. ಎಲ್ಲ ಜಿಲ್ಲೆಗಳಂತೆ ದಾವಣಗೆರೆಯಲ್ಲೂ ಯಾರು ಸಂಪುಟ ಸೇರುತ್ತಾರೆ ಎಂಬ ಕುತೂಹಲ ಶುರುವಾಗಿದೆ.

    ಕಾಂಗ್ರೆಸ್‌ನಲ್ಲಿ ಸಚಿವಾಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಹೀಗಾಗಿ ಕ್ಷೇತ್ರವಾರು, ಜಾತಿವಾರು ಅಳೆದೂ-ತೂಗಿ ಸಾಮಾಜಿಕ ನ್ಯಾಯ ಒದಗಿಸುವ ಪ್ರಕ್ರಿಯೆಗೆ ಇನ್ನಷ್ಟೇ ಚಾಲನೆ ಸಿಗಬೇಕಿದೆ. ಇದರೊಟ್ಟಿಗೆ ಒಂದಷ್ಟು ಆಪ್ತೇಷ್ಟರಿಗೆ ಮಂತ್ರಿಗಿರಿ ನಿಶ್ಚಿತ.
    ಇದೆಲ್ಲ ಲೆಕ್ಕಾಚಾರ ಮಾಡಿದಾಗ ಜಿಲ್ಲೆಗೊಬ್ಬ ಶಾಸಕರಿಗೆ ಮಂತ್ರಿಗಿರಿ ದಕ್ಕುವುದು ಖಾತ್ರಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ, ಏಳರ ಪೈಕಿ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ.
    ಸದ್ಯಕ್ಕೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಹೆಸರು ಚಾಲ್ತಿಯಲ್ಲಿವೆ. ಹೊನ್ನಾಳಿಯ ಡಿ.ಜಿ.ಶಾಂತನಗೌಡರು ಅದಾಗಿ ಅವಕಾಶ ಬಂದರೆ ಬರಲಿ ಎನ್ನುತ್ತಿದ್ದಾರೆ. ತಂದೆ-ಮಗ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನಲಾಗಿದೆ.
    ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ, ಆರನೇ ಬಾರಿ ಶಾಸಕರೂ ಆಗಿರುವ ಡಾ. ಶಾಮನೂರು ಶಿವಶಂಕರಪ್ಪ ಅವರ ಹೆಸರು ಮುಂಚೂಣಿಯಲ್ಲಿದೆ. 2013ರ ವೇಳೆ ಸಿದ್ದರಾಮಯ್ಯ ಸರ್ಕಾರದಲ್ಲಿ ಎರಡೂವರೆ ವರ್ಷ ಎಪಿಎಂಸಿ ಹಾಗೂ ತೋಟಗಾರಿಕೆ ಸಚಿವರಾಗಿದ್ದರು. ವಯಸ್ಸಿನ ಫ್ಯಾಕ್ಟರ್ ಮೀರಿಯೂ ಅವರು ಸಮ್ಮತಿಸಿದರೆ ಎರಡನೇ ಬಾರಿಗೆ ಸಚಿವರಾಗುವ ಯೋಗ ಅವರ ಪಾಲಿಗಿದೆ.
    ದಾವಣಗೆರೆ ಉತ್ತರ ಕ್ಷೇತ್ರದ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್, ಎಸ್‌ಎಂ ಕೃಷ್ಣ ಸಿಎಂ ಆಗಿದ್ದಾಗ 1998ರಲ್ಲಿ ಯುವಜನ ಸೇವಾ-ಕ್ರೀಡಾ ಇಲಾಖೆ ನಿಭಾಯಿಸಿದ್ದರು. 2013ರಲ್ಲೂ ಎರಡೂವರೆ ವರ್ಷ ಕಾಲ ಎಪಿಎಂಸಿ- ತೋಟಗಾರಿಕೆ ಖಾತೆಗಳ ಜವಾಬ್ದಾರಿ ನಿರ್ವಹಿಸಿದ್ದರು. ಈಗ ಅವರ ಪಾಲಿಗೆ ಮೂರನೇ ಬಾರಿಗೆ ಸಚಿವರಾಗುವ ಅದೃಷ್ಟ ಬಂದೊದಗಿದೆ. ಯುವಕರಿಗೆ ಪಕ್ಷ ಮಣೆ ಹಾಕಿದಲ್ಲಿ ಎಸ್ಸೆಸ್ಸೆಂಗೆ ಅವಕಾಶ ಹೆಚ್ಚಿದೆ.
    ಮಲ್ಲಿಕಾರ್ಜುನ್ ತರುವಾಯ ಹಿರಿತನದಲ್ಲಿ ಮುಂದಿರುವ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ಅವರು ಮೂರನೇ ಬಾರಿಗೆ ವಿಧಾನಸಭೆ ಮೆಟ್ಟಲೇರಿದ್ದಾರೆ. ‘ಪಕ್ಷ್ಷದಲ್ಲಿ ನನಗಿಂತ ಹಿರಿಯರಿದ್ದಾರೆ. ಅದಾಗಿಯೇ ಅವಕಾಶ ಬಂದರೆ ನಿರ್ವಹಣೆ ಮಾಡಲು ಸಿದ್ಧ’ ಎನ್ನುತ್ತಾರೆ.
    ಚೊಚ್ಚಲ ಬಾರಿಗೆ ಗೆದ್ದಿರುವ ಶಿವಗಂಗಾ ಬಸವರಾಜ್, ಕೆ.ಎಸ್.ಬಸವಂತಪ್ಪ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮೂವರಲ್ಲಿ ಕೆಲವರಿಗೆ ನಿಗಮ- ಮಂಡಳಿಯಲ್ಲಿ ಸ್ಥಾನ ನೀಡುವ ಸಾಧ್ಯತೆಯೂ ಇಲ್ಲದಿಲ್ಲ.
    ಸಿದ್ದರಾಮಯ್ಯ- ಡಿಕೆಶಿ ನಡುವೆ (30:30 ತಿಂಗಳು) ಅಧಿಕಾರ ಹಂಚಿಕೆ ಸೂತ್ರವಾಗಿದೆ. ಹೀಗಾಗಿ ಜಿಲ್ಲೆಯಲ್ಲೂ ಎರಡು ಅವಧಿಗೆ ಸಚಿವರಾಗುವ ಅವಕಾಶ ಸಿಗಬಹುದು. 2013ರಲ್ಲಿ ಮೊದಲ ಎರಡೂವರೆ ವರ್ಷ ಶಾಮನೂರು ಶಿವಶಂಕರಪ್ಪ ಹಾಗೂ ಆನಂತರದ ಅವಧಿಗೆ ಎಸ್.ಎಸ್.ಮಲ್ಲಿಕಾರ್ಜುನ್ ಸಚಿವರಾಗಿದ್ದರೂ ಈ ಬಾರಿಯೂ ಅದೇ ಸೂತ್ರ ಪಾಲನೆಯಾಗುತ್ತದೆಯೇ ಎಂಬ ಚರ್ಚೆಗಳು ಶುರುವಾಗಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts