ದಾವಣಗೆರೆಯಲ್ಲಿ ಪಟಾಕಿ ವ್ಯಾಪಾರ ಚುರುಕು  -57 ಮಳಿಗೆಗಳಲ್ಲಿ ಸುರಕ್ಷತಾ ಕ್ರಮ - ದರ ಹೆಚ್ಚಿದ್ದರೂ ಖರೀದಿಗಿಲ್ಲ ಧಕ್ಕೆ

dvg-pataki.jpg
Published on

ದಾವಣಗೆರೆ: ಬೆಳಕಿನ ಹಬ್ಬ ದೀಪಾವಳಿಗೆ ಪಟಾಕಿ ಸದ್ದಿದ್ದರೇನೆ ಜೋಷ್. ಇಲ್ಲಿನ ಬಾಲಕರ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ತಲೆ ಎತ್ತಿರುವ ತಾತ್ಕಾಲಿಕ ಮಳಿಗೆಗಳಲ್ಲಿ ಪಟಾಕಿ ಮಾರಾಟ ಸದ್ದಿಲ್ಲದೆ ಶುರುವಾಗಿದೆ. ಜಿಎಂಐಟಿ ಕಾಲೇಜು ಪಕ್ಕದಲ್ಲಿ ತಾತ್ಕಾಲಿಕ ಮಳಿಗೆಗಳನ್ನು ತೆರೆಯಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ ವರ್ತಕರ ಒತ್ತಡದಿಂದಾಗಿ ಜಿಲ್ಲಾ ಸಚಿವರ ಸೂಚನೆಯಂತೆ ಕಡೇ ಗಳಿಗೆಯಲ್ಲಿ ಹೈಸ್ಕೂಲ್ ಮೈದಾನಕ್ಕೇ ರೀಎಂಟ್ರಿ ಪಡೆಯಿತು. ಅರ್ಜಿ ಸಲ್ಲಿಸಿದ್ದ 109 ಮಂದಿ ವರ್ತಕರ ಪೈಕಿ ಈ ಬಾರಿ 57 ಜನರಿಗೆ ಪರವಾನಿಗೆ ದೊರೆತಿದ್ದು, ವರ್ತಕರು ಪಟಾಕಿ ಮಳಿಗೆಗಳಲ್ಲಿ ಸರ್ಕಾರದ ನಿಬಂಧನೆಯಂತೆ ಅಗ್ನಿನಂದಕ, ನೀರು, ಮರಳಿನ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಮುಂಜಾಗ್ರತಾ ಸ್ಥಳದಲ್ಲಿ ಒಂದು ಅಗ್ನಿಶಾಮಕ ವಾಹನ ಇರಿಸಲಾಗಿದೆ. ಮಧ್ಯಾಹ್ನದ ಬಿರುಬಿಸಿಲಿನ ನಡುವೆಯೂ ಪಾಲಕರು ಮಕ್ಕಳೊಂದಿಗೆ ಬರುತ್ತಿದ್ದು ಮಸಿಕುಡಿಕೆ, ಭೂಚಕ್ರ, ರಾಕೆಟ್, ಶಾಟ್ಸ್, ಸುರ್‌ಸುರ್‌ಬತ್ತಿ ಮೊದಲಾದ ಇಷ್ಟದ ಕ್ಯಾಕರ್ಸ್‌ ಖರೀದಿಸುತ್ತಿದ್ದಾರೆ. ಮಕ್ಕಳಿಗೆ ಬೇಕಾದ ತಮಾಷೆ ಮದ್ದಿನ ಜತೆಗೆ ಹೆಚ್ಚು ಸೌಂಡ್ ಮಾಡುವ ಪಟಾಕಿಗಳೂ ಸದ್ದಿಲ್ಲದೆ ಮಾರಾಟ ಆಗುತ್ತಿವೆ. ಬಹುತೇಕ ಹಸಿರು ಪಟಾಕಿ ಚಿಹ್ನೆ ಮುದ್ರಿತ ಪಟಾಕಿಗಳು ಮಾರಾಟ ಆಗುತ್ತಿವೆ. 200ರಿಂದ 2 ಸಾವಿರ ರೂ.ವರೆಗೆ ಗಿಫ್ಟ್ ಬಾಕ್ಸ್‌ಗಳ ದರ ನಿಗದಿಯಾಗಿತ್ತು. ಪಿಕಾಕ್, ಹೆಲಿಕಾಪ್ಟರ್ ಮೊದಲಾದ ಹೊಸ ಮಾದರಿಗಳಿಗೆ ಬೇಡಿಕೆ ಇತ್ತು. ಲಕ್ಷ್ಮೀ ಪಟಾಕಿಗಳ ಪ್ಯಾಕ್ ಮೇಲೆ ಲಕ್ಷ್ಮೀ ಮಾತೆ ಬದಲಾಗಿ ಯುವತಿ, ಗೊಂಬೆ ಚಿತ್ರಗಳು ಕಂಡುಬಂದಿದ್ದು ವಿಶೇಷವಾಗಿತ್ತು. ದಾವಣಗೆರೆ ಸೇರಿ ಸುತ್ತಮುತ್ತಲ ನಗರಪ್ರದೇಶಗಳಲ್ಲಿ ಶಿವಕಾಶಿಯಿಂದಲೇ ಪಟಾಕಿ ಸರಂಜಾಮು ಬರಲಿವೆ. ಈ ಬಾರಿ ಪಟಾಕಿ ದರ ಶೇ.12ರಿಂದ 15ರಷ್ಟು ಹೆಚ್ಚಾಗಿದೆ. ಈ ಬಾರಿ ಮಾರಾಟಕ್ಕೆ ಅನುಮತಿ ಸಿಗುವುದೇ ಕಷ್ಟ ಎಂಬಂತಾಗಿತ್ತು. ಬಹುತೇಕರು ಕಳೆದೊಂದು ವಾರದಿಂದ ಪಟಾಕಿ ಸಾಮಗ್ರಿ ತರಿಸಿಕೊಂಡಿದ್ದಾರೆ ಎಂಬುದಾಗಿ ವರ್ತಕರು ಹೇಳಿದರು. ದಾವಣಗೆರೆ ನಗರ ಒಂದರಲ್ಲೇ ದೀಪಾವಳಿ ಸೀಸನ್‌ಗೆ ಸುಮಾರು 8 ಕೋಟಿ ರೂ.ಗೂ ಅಧಿಕ ಪಟಾಕಿ ವ್ಯಾಪಾರ ಆಗುತ್ತದೆ. ತಮಾಷೆ ಮದ್ದು ಹಚ್ಚದಿರುವ ಬಗ್ಗೆ ಕೆಲವೆಡೆ ಪ್ರತಿಜ್ಞಾ ಸ್ವೀಕಾರ ನಡೆದರೂ ವಹಿವಾಟಿನಲ್ಲಿ ವ್ಯತ್ಯಯವಾಗಿಲ್ಲ. ಈ ಬಾರಿ ಮಳೆಯಬ್ಬರ ಇಲ್ಲದಿರುವುದೂ ಕೂಡ ವರ್ತಕರಿಗೆ ವರದಾನವಾಗಿದೆ. ----

ಶನಿವಾರದಿಂದ ಮಳಿಗೆಗಳಲ್ಲಿ ವ್ಯಾಪಾರಕ್ಕೆ ಚಾಲನೆ ಸಿಕ್ಕಿದೆ. ಫ್ಯಾನ್ಸಿ ಪಟಾಕಿಗಳಿಗೆ ಹೆಚ್ಚು ಬೇಡಿಕೆ ಇದೆ. ಕಡೆಯ ಮೂರು ದಿನಗಳಲ್ಲಿ ವಹಿವಾಟು ಹೆಚ್ಚಾಗುವ ನಿರೀಕ್ಷೆ ಇದೆ. ಪಿ.ಸಿ.ಶ್ರೀನಿವಾಸ್ ಪಟಾಕಿ ಮಾರಾಟಗಾರರು, ಬಳಕೆದಾರರ ಸಂಘದ ಅಧ್ಯಕ್ಷ.

------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net