ತಿರುಪತಿ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಲು ಸೆ.30ರಂದು ಧರ್ಮಾಗ್ರಹ ಸಭೆ

vhp
Published on

ಮಂಗಳೂರು: ತಿರುಪತಿ ಶ್ರೀ ವೆಂಕಟರಮಣ ದೇವರಿಗೆ ದನದ ಕೊಬ್ಬು ಮಿಶ್ರಿತ ತುಪ್ಪದಿಂದ ತಯಾರಿಸಿದ ಲಡ್ಡು ನೈವೇದ್ಯ ಅರ್ಪಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಹಿಂದೂ ಪರಿಷತ್ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದರೊಂದಿಗೆ ಸಾಧು ಸಂತರ ನೇತೃತ್ವದಲ್ಲಿ ಸೆ.30ರಂದು ಧರ್ಮಾಗ್ರಹ ಸಭೆ ನಡೆಸಲು ನಿರ್ಧರಿಸಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್, ಶ್ರೀ ದೇವರಿಗೆ ದನದ ಕೊಬ್ಬು ಮಿಶ್ರಿತ ತುಪ್ಪದಿಂದ ತಯಾರಿಸಿದ ಲಡ್ಡು ಅರ್ಪಿಸಿರುವುದು ಅಕ್ಷಮ್ಯ ಅಪರಾಧ. ಧಾರ್ಮಿಕ ಬಾವನೆಗೆ ಧಕ್ಕೆ ತಂದಿರುವ ಆಂಧ್ರಪ್ರದೇಶ ಸರ್ಕಾರದ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲಾಗುವುದು. ಈ ಹಿನ್ನೆಲೆಯಲ್ಲಿ ಸೆ.30ರಂದು ನಗರದ ಡೊಂಗರಕೇರಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಬೆಳಗ್ಗೆ 8ರಿಂದ 12.30ರವರೆಗೆ ಹಿಂದು ಮುಖಂಡರು, ಸಾಧು ಸಂತರನ್ನು ಒಳಗೊಂಡಂತೆ ಧರ್ಮಾಗ್ರಹ ಸಭೆ ನಡೆಯಲಿದೆ. ಸಮಸ್ತ ಹಿಂದೂ ಬಾಂಧವರು ಈ ಸಭೆಯಲ್ಲಿ ಭಾಗವಹಿಸಬೇಕು ಎಂದರು.

ಶ್ರೀ ದೇವರಿಗೆ ಅಪವಿತ್ರ ನೈವೇದ್ಯ ಅರ್ಪಿಸಿರುವುದು ನೋವಿನ ವಿಚಾರ. ಇದಕ್ಕೆ ಕಾರಣವಾದ ಆಂಧ್ರ ಪ್ರದೇಶ ಸರ್ಕಾರ ಮತ್ತು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವಾಗಬೇಕು. ಆದ್ದರಿಂದ ಕೇಂದ್ರ ಸರ್ಕಾರ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು. ಧರ್ಮಾಗ್ರಹ ಸಬೆಯಲ್ಲಿ ತಿರುಪತಿ ಕ್ಷೇತ್ರ ಸೇರಿದಂತೆ ದೇಶದ ಎಲ್ಲಾ ದೇವಸ್ಥಾನಗಳು ಸರ್ಕಾರದಿಂದ ಹೊರ ತರುವ ಬಗ್ಗೆಯೂ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದರು.

ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ.ಪುರುಷೋತ್ತಮ, ದಕ್ಷಿಣ ಪ್ರಾಂತ ಸಹಸೇವಾ ಪ್ರಮುಖ್ ಗೋಪಾಲ್ ಕುತ್ತಾರ್, ಬಜರಂಗದಳ ಪ್ರಾಂತ ಸಹ ಸಂಯೋಜಕ್ ಭುಜಂಗ ಕುಲಾಲ್, ಜಿಲ್ಲಾ ಉಪಾಧ್ಯಕ್ಷ ಹರೀಶ್ ಕುಮಾರ್ ಶೇಟ್, ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ ಉಪಸ್ಥಿತರಿದ್ದರು.

-----------------

ಸೂಕ್ತ ಕ್ರಮ ಕೈಗೊಳ್ಳಲು ವಿಹಿಂಪ ಸಹಿ ಸಂಗ್ರಹ

ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಹಿನ್ನೆಲೆಯಲ್ಲಿ ಆಂದ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಪತ್ರ ಅಭಿಯಾನವನ್ನು ವಿಹಿಂಪ ಆರಂಭಿಸುತ್ತಿದ್ದು, ಸಮಸ್ತ ಹಿಂದು ಬಾಂಧವರು ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆಯಾದುದನ್ನು ಪತ್ರ ಮೂಲಕ ಉಲ್ಲೇಖಿಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಬೇಕು. ವಿಹಿಂಪ ಸಹಿ ಸಂಗ್ರಹದ ಮೂಲಕ ವೈಯಕ್ತಿಕ ನೆಲೆಯಲ್ಲೂ ಪತ್ರ ಬರೆಯಲೂ ಕರೆ ನೀಡುತ್ತಿದೆ ಎಂದು ವಿಹಿಂಪ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಹೇಳಿದರು.

-----------------

ತಿರುಪತಿ ಶ್ರೀ ವೆಂಕಟರಮಣ ದೇವರ ಲಡ್ಡು ಪ್ರಸಾದವನ್ನು ಶ್ರೇಷ್ಠ ಪ್ರಸಾದವೆಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಸ್ವೀಕಾರ ಮಾಡುವ ಪ್ರಸಾದದಲ್ಲಿ ದನದ ಕೊಬ್ಬನ್ನು ಮಿಶ್ರಣ ಮಾಡಿರುವುದರ ವಿರುದ್ಧ ಸಿಬಿಐ ತನಿಖೆಗೆ ಆಗ್ರಹಿಸಿ ಎಲ್ಲಾ ದೇವಸ್ಥಾನ, ಮಠ ಮಂದಿರ ಮತ್ತು ಧಾರ್ಮಿಕ ಕೇಂದ್ರಗಳಲ್ಲಿ ವಿಶೇಷ ಪ್ರಾರ್ಥನೆ ನಡೆಯಬೇಕು. ಅಲ್ಲದೆ ಧಾರ್ಮಿಕ ಕೇಂದ್ರಗಳು ಸರ್ಕಾರದ ಆಡಳಿತದಿಂದ ಮುಕ್ತವಾಗಲು ಹಿಂದು ಬಾಂಧವರು ಕೂಡ ಪ್ರಾರ್ಥನೆ ನಡೆಸಬೇಕು.

-ಶಿವಾನಂದ ಮೆಂಡನ್, ವಿಹಿಂಪ ಮಂಗಳೂರು ವಿಭಾಗ ಸಹ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net