

ಕೊಟ್ಟೂರು: ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ದೇವಸ್ಥಾನದ ವಿಐಪಿ ವಸತಿಗೃಹ ಕಟ್ಟಡ ಮುಂದಿನ ಸ್ಥಳ ತ್ಯಾಜ್ಯ ತಾಣವಾಗಿ ಮಾರ್ಪಟ್ಟಿದೆ. ಇದರಿಂದಾಗಿ ಶ್ರೀ ಗುರು ಕೊಟ್ಟೂರೇಶ್ವರರ ಮೂರುಕಲ್ಲು ಮಠ, ಅಂಜುಮನ್ ಶಾದಿಮಹಾಲ್‌ಗೆ ಬರುವ ಜನರು ದುರ್ನಾತದಿಂದಾಗಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಟ್ಟಣದಲ್ಲಿ 10 ಎಕರೆ ಮೇಲ್ಪಟ್ಟ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಘಟಕವಿದ್ದು, ತ್ಯಾಜ್ಯ ವಿಲೆವಾರಿಗೆ ಒಂದು ಮಿನಿ ಲಾರಿ, ನಾಲ್ಕು ಟ್ರ್ಯಾಕ್ಟರ್, ಏಳು ಮಿನಿ ವಾಹನ, ಎರಡು ಜೆಸಿಬಿ ಯಂತ್ರಗಳಿದ್ದು, 36 ಪೌರಕಾರ್ಮಿಕರು ಪಟ್ಟದ ನೈರ್ಮಲ್ಯಕ್ಕಾಗಿ ನಿತ್ಯ ಶ್ರಮಿಸುತ್ತಿದ್ದಾರೆ. ಪ್ರತಿ ದಿನ ಮನೆ, ಅಂಗಡಿಗಳ ಬಾಗಿಲಿಗೆ ತೆರಳಿ ಕಸ ಸಂಗ್ರಹಿಸಲಾಗುತ್ತಿದ್ದರೂ, ಕೆಲವರು ಪಟ್ಟಣ ಪಂಚಾಯಿತಿ ವಾಹನಗಳಲ್ಲಿ ತ್ಯಾಜ್ಯ ಹಾಕದೆ ವಿಐಪಿ ವಸತಿಗೃಹ ಕಟ್ಟಡದ ಮುಂದೆ ತಂದು ಸುರಿಯುತ್ತಿದ್ದಾರೆ. ಈ ಮೂಲಕ ಸಾಂಕ್ರಾಮಿಕ ರೋಗ ಹರಡಲು ಕಾರಣರಾಗಿದ್ದಾರೆ. ಇಲ್ಲಿನ ಕಸವನ್ನು ವಿಲೇವಾರಿ ಮಾಡುವಲ್ಲಿ ಪಟ್ಟಣ ಪಂಚಾಯಿತಿ ಕೂಡ ನಿರ್ಲಕ್ಷೃ ವಹಿಸಿದೆ.