More

    ತುಮಕೂರು ನಗರಕ್ಕೆ ವಾರಕ್ಕೊಮ್ಮೆ ನೀರು

    ಸೋರಲಮಾವು ಶ್ರೀಹರ್ಷ ತುಮಕೂರು
    ನಗರಕ್ಕೆ ವಾರದಿಂದ ನೀರು ಪೂರೈಕೆ ಸ್ಥಗಿತವಾಗಿದ್ದು, ಜನರಿಗೆ ಮಳೆಗಾಲದಲ್ಲಿಯೂ ಬೇಸಿಗೆಯ ಬಿಸಿ ತಟ್ಟಲು ಆರಂಭಿಸಿದೆ.
    ಕುಡಿಯುವ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಗಾರ ಬರಿದಾಗುತ್ತಿರುವ ಜತೆಗೆ ಶುದ್ಧೀಕರಣ ಘಟಕದಿಂದ ಸರಬರಾಜು ಮಾಡುವ ಯಂತ್ರಗಳೂ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಗರವಾಸಿಗಳು ನೀರಿಲ್ಲದೆ ಪರದಾಡುವಂತಾಗಿದೆ. ಪಾಲಿಕೆ ಅಧಿಕಾರಿಗಳು, ಜನಪ್ರತಿನಿಧಿಗಳು ಕಳೆದ ಐದು ದಿನದಿಂದ ಕೈಚೆಲ್ಲಿ ಕೂತಿದ್ದು, ಜನರು ನೀರಿಲ್ಲದೆ ಖಾಸಗಿ ಟ್ಯಾಂಕರ್‌ಗಳ ಮೊರೆ ಹೋಗುವಂತಾಗಿದೆ. ನಲ್ಲಿಯಲ್ಲಿ ನೀರು ಪೂರೈಕೆ ಸ್ಥಗಿತವಾಗಿದ್ದರೂ ಜನರಿಗೆ ಪರ್ಯಾಯ ವ್ಯವಸ್ಥೆ ಮಾಡುವ ಕರ್ತವ್ಯವನ್ನು ಪಾಲಿಕೆ ಮರೆತಿದೆ. ಪ್ರಸ್ತುತ ಬುಗುಡನಹಳ್ಳಿ ಹಾಗೂ ಬಿಎನ್‌ಆರ್ ಪಾಳ್ಯದ ಜಲಸಂಗ್ರಹಾಗಾರದಿಂದ ನೀರು ಶುದ್ಧೀಕರಿಸಿ ಸರಬರಾಜು ಮಾಡಲಾಗುತ್ತಿದ್ದು ನೀರಿನ ಅಭಾವದಿಂದ 6 ದಿನಕ್ಕೊಮ್ಮೆ ನೀರು ಬಿಡುತ್ತಿರುವುದು ಜನರ ನೆಮ್ಮದಿ ಕೆಡಿಸಿದೆ.
    ಮಹಾನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ 3 ಲಕ್ಷ ಜನಸಂಖ್ಯೆಯಿದ್ದು ಪ್ರತಿನಿತ್ಯ 57 ಎಂಎಲ್‌ಡಿ ನೀರಿನ ಅವಶ್ಯಕತೆಯಿದೆ. ಕಳೆದ ತಿಂಗಳಿನಿಂದಲೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದ ಸಮಸ್ಯೆ ದಿನೇದಿನೆ ಉಲ್ಬಣಿಸಲಿದೆ.
    ‘ಹೇಮೆ’ ನೀರು ಪೂರೈಸುವ ಬುಗಡನಹಳ್ಳಿ ಜಲಸಂಗ್ರಹಾಗಾರವು 542 ಎಕರೆ ವಿಸ್ತೀರ್ಣ ಹೊಂದಿದ್ದು, ಸಂಗ್ರಹಾಗಾರದ ನೀರಿನ ಸಾಮರ್ಥ್ಯ 0.24 ಟಿಎಂಸಿ. ಸದ್ಯ 80 ಎಂಸಿಎಫ್‌ಟಿ ನೀರಿದ್ದು ಪ್ರತಿನಿತ್ಯ ಕೇವಲ 54 ಎಂಎಲ್‌ಡಿ ನೀರನ್ನು ಮಾತ್ರ ಬಳಸಲಾಗುತ್ತಿದೆ. ಇದೇ ಪ್ರಮಾಣದಲ್ಲಿ ನೀರು ಬಳಸಿದ್ದೇ ಆದಲ್ಲಿ ಜೂನ್ ಅಂತ್ಯದವರೆಗೆ ಹೇಮಾವತಿ ನೀರು ಪೂರೈಕೆ ಸಾಧ್ಯವಾಗಲಿದೆ ಎಂದು ಇಂಜಿನಿಯರ್‌ಗಳು ವರದಿ ನೀಡಿದ್ದಾರೆ.
    ಪಾಲಿಕೆ ವತಿಯಿಂದ ಹೇಮಾವತಿ ಇಲಾಖೆಗೆ ಪತ್ರ ಬರೆದಿದ್ದು ಕುಡಿಯುವ ನೀರಿನ ಉದ್ದೇಶಕ್ಕೆ ಶೀಘ್ರವೇ ನೀರು ಹರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ, ನಾಲೆ ಆಧುನೀಕರಣ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ನೀರೂ ಲಭ್ಯವಾಗುತ್ತಿಲ್ಲ.
    ನಗರಕ್ಕೆ ಪ್ರತಿನಿತ್ಯ 57 ಎಂಎಲ್‌ಡಿ ನೀರಿನ ಅವಶ್ಯಕತೆ ಇದೆ. ಕೇವಲ 25 ಎಂಎಲ್‌ಡಿ ನೀರು ಬಳಸಲಾಗುತ್ತಿದ್ದು ಇನ್ನುಳಿದಂತೆ 31 ಎಂಎಲ್‌ಡಿ ನೀರನ್ನು 700ಕ್ಕೂ ಹೆಚ್ಚು ಕೊಳವೆಬಾವಿಗಳ ಮೂಲಕ ಪಡೆದು ಜನರಿಗೆ ಪೂರೈಸಲಾಗುತ್ತಿದೆ. 20 ಎಂಎಲ್‌ಡಿ ನೀರು ಕೊರತೆ ಇದ್ದು 8-10 ದಿನಕ್ಕೊಮ್ಮೆ 1 ಗಂಟೆ ನೀರು ಪೂರೈಸಲಾಗುತ್ತಿದೆ. ಪಾಲಿಕೆಯಲ್ಲಿ ನೀರಿನ ಸಮಸ್ಯೆ ಉಲ್ಬಣಿಸುತ್ತಿದ್ದು, ಅನಿವಾರ್ಯವಾದರೆ ಪಾಲಿಕೆ ಗುರುತಿಸಿರುವ 1500ಕ್ಕೂ ಹೆಚ್ಚು ಖಾಸಗಿ ಕೊಳವೆಬಾವಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಶೀಘ್ರವೇ ಮಳೆರಾಯ ಕರುಣೆ ತೋರದಿದ್ದರೆ ಸ್ಮಾರ್ಟ್‌ಸಿಟಿ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಿಸಲಿದೆ.
    ನಗರದ ಸಾಮಾನ್ಯ ನಿವಾಸಿಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಆದರೆ, ಪೇಯಿಂಗ್ ಗೆಸ್ಟ್ ಹಾಸ್ಟೆಲ್(ಪಿಜಿ)ಗಳು, ಕಾರ್ಪೋರೇಟರ್‌ಗಳ ಮನೆಗಳಲ್ಲಿ ನೀರಿನ ಸಮಸ್ಯೆ ಇಲ್ಲ. ಜಲಾಶಯದಲ್ಲಿ ನೀರು ಖಾಲಿಯಾಗುತ್ತಿರುವ ಬಗ್ಗೆಯೂ ಜಾಗೃತಿ ಮೂಡಿಸಲು ಪಾಲಿಕೆ ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
    ಸುಮಾಶ್ರೀ, ಅಶೋಕನಗರ ನಿವಾಸಿ
    ಉಪಯೋಗಕ್ಕೆ ಯೋಗ್ಯವಿಲ್ಲ ಅಮಾನಿಕೆರೆ ನೀರು!: ತುಮಕೂರಿನ ಅಮಾನಿಕೆರೆಯೂ 30 ವರ್ಷಗಳ ನಂತರ ತುಂಬಿದ್ದು ಇಲ್ಲಿರುವ ನೀರು ಬಳಸಿಕೊಳ್ಳಲು ಸಾಧ್ಯವಿಲ್ಲ. ಕೆರೆ ನೀರಿಗೆ ಕೊಳಚೆ ನೀರು ಸೇರುತ್ತಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಇದನ್ನು ಬಳಸಿಕೊಳ್ಳಲು ಸಾಧ್ಯವಿಲ್ಲ. ಮುಂಜಾಗ್ರತೆಯಿಂದ ಕೆರೆಗೆ ಕೊಳಚೆ ನೀರು ಬರುವುದನ್ನು ತಡೆದಿದ್ದರೆ ಇಲ್ಲಿರುವ ನೀರನ್ನು ನಗರವಾಸಿಗಳಿಗೆ ಕುಡಿಯಲು ಬಳಸಿಕೊಳ್ಳಲು ಅವಕಾಶವಿತ್ತು. ಅಧಿಕಾರಿಗಳ ಬೇಜವಾಬ್ದಾರಿಯಿಂದ ನಗರದಲ್ಲಿ ಮಳೆಗಾಲದಲ್ಲಿಯೂ ನೀರಿಗೆ ಸಮಸ್ಯೆ ಎದುರಾಗಿದೆ.
    ಬುಗುಡನಹಳ್ಳಿ ಜಲಾಶಯದಲ್ಲಿ 80 ಎಂಸಿಎಫ್‌ಟಿ ನೀರು ಲಭ್ಯವಿದ್ದು ಡೆಡ್ ಸ್ಟೋರೇಜ್ ಬಿಟ್ಟರೆ ಜೂನ್ ಅಂತ್ಯದವರೆಗಷ್ಟೇ ನೀರು ಪೂರೈಸಲು ಸಾಧ್ಯ. ನಗರದೆಲ್ಲೆಡೆ ಇರುವ 700 ಕೊಳವೆಬಾವಿಗಳಿಂದ ವಾರಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.
    ಸುಧೀಂದ್ರನಾಯ್ಕ, ಎಇ, ಮಹಾನಗರ ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts