

ಆಳಂದ: ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಭೂ ಸುಧಾರಣೆ, ವಿದ್ಯಾರ್ಥಿ ವಸತಿನಿಲಯ ಹಾಗೂ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಮುನ್ನುಡಿ ಬರೆದು ಸಮ ಸಮಾಜದ ಕನಸು ಸಾಕಾರಗೊಳಿಸಿದರು ಎಂದು ಸಂಬುದ್ಧ ಪದವಿ ಕಾಲೇಜಿನ ಪ್ರಾಚಾರ್ಯ ಸಂಜಯ ಪಾಟೀಲ್ ನುಡಿದರು.
ತಾಲೂಕು ಆಡಳಿತ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 108ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಅರಸು ಶ್ರೀಮಂತ ಮನೆತನದಲ್ಲಿ ಹುಟ್ಟಿದರೂ ಸಾಮಾನ್ಯ ರೈತನಾಗಿ ಬದುಕಿ, ತಳ ಸಮುದಾಯದ ಅಭ್ಯುದಯಕ್ಕೆ ಶ್ರಮಿಸಿದರು. ಅವರ ತತ್ವ-ಸಿದ್ಧಾಂತವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಇಒ ಮಾನಪ್ಪ ಕಟ್ಟಿಮನಿ, ಗ್ರೇಡ್-2 ತಹಸೀಲ್ದಾರ್ ಭೀಮಣ್ಣ ಕುದುರಿ, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಸುನೀತಾ ಉಡಗಿ, ಪಿಎಸ್ಐ ವಾತ್ಸಲ್ಯ, ಪ್ರಮುಖರಾದ ಬಸವರಾಜ ಕಾಳೆ, ಈರಣ್ಣ ಹತ್ತರಕಿ, ಭೀಮಾಶಂಕರ ಮಡಿವಾಳ ಇತರರಿದ್ದರು.
ಸಿದ್ದಣ್ಣ ನಂದೂರ ಪ್ರಾಸ್ತಾವಿಕ ಮಾತನಾಡಿದರು. ಶಿವಶರಣಪ್ಪ ಪೂಜಾರಿ, ಸುರೇಶ ಆಳಂದ ಸಂಗೀತ ಗಾಯನ ನಡೆಸಿಕೊಟ್ಟರು. ಸಂಪತಕುಮಾರ ವೇದಪಾಠಕ ನಿರೂಪಣೆ ಮಾಡಿ, ವಂದಿಸಿದರು.