ಡೆಂಘೆ ನಿಯಂತ್ರಣಕ್ಕೆ ಸಹಕರಿಸಿ:ಡಾ.ಟಿ.ಲಿಂಗರಾಜು

2408-Kpl-Ravi-1
Published on

ಕೊಪ್ಪಳ: ಡೆಂಘೆ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿ. ಇಲಾಖೆಯಿಂದಲೂ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಡಿಎಚ್‌ಒ ಡಾ.ಟಿ.ಲಿಂಗರಾಜು ತಿಳಿಸಿದರು.


ನಗರದ ಹಳೇ ಜಿಲ್ಲಾಸ್ಪತ್ರೆಯಲ್ಲಿ ಡೆಂೆ ಜಾಗೃತಿ ರಥ ಯಾತ್ರೆಗೆ ಗುರುವಾರ ಚಾಲನೆ ನೀಡಿ ಮಾತನಾಡಿದರು.


ರಾಜ್ಯ ಸರ್ಕಾರದ ನಿರ್ದೇಶನದಂತೆ ಜಿಲ್ಲೆಯಲ್ಲಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎರಡು ತಿಂಗಳವರೆಗೆ ಡೆಂಘೆ ಪ್ರಸಾರ ಅವಧಿ ಇರಲಿದೆ. ಈ ಜ್ವರಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುವುದು. ಜನರು ಭಯ ಪಡುವ ಆತಂಕವಿಲ್ಲ. ಆದರೂ, ಎಚ್ಚರಿಕೆಯಿಂದ ಇರಬೇಕು. ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ಬರದಂತೆ ಮುನ್ನೆಚ್ಚರಿಕೆವಹಿಸಬೇಕು. ಯಾವುದೇ ರೋಗ ಲಕ್ಷಣ ಕಂಡು ಬಂದಲ್ಲಿ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.


ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ವೆಂಕಟೇಶ್ ಮಾತನಾಡಿ, ಡೆಂಘೆ ಜ್ವರ ಈಡಿಸ್ ಜಾತಿ ಸೊಳ್ಳೆ ಕಚ್ಚುವುದರಿಂದ ಬರುತ್ತದೆ. ಹಗಲಿನಲ್ಲಿ ಕಚ್ಚುತ್ತದೆ. ನೀರು ಶೇಖರಣೆ ಇರುವಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಹೀಗಾಗಿ ಮನೆ ಸುತ್ತ ಮುತ್ತ ನೀರು ಸಂಗ್ರಹಗೊಳ್ಳದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.


ಜಿಲ್ಲಾ ವಿ.ಬಿ.ಡಿ ಸಲಹೆಗಾರ ರಮೇಶ್ ಮಾತನಾಡಿ, ಮಳೆಗಾಲ ಮತ್ತು ನಂತರದ ಸಂದರ್ಭದಲ್ಲಿ ಸೊಳ್ಳೆ ಸಂತಾನೋತ್ಪತ್ತಿ ಹೆಚ್ಚುತ್ತದೆ. ಹೀಗಾಗಿ ಸೊಳ್ಳೆಗಳಿಂದ ದೂರವಿರಿ. ಯಾವುದೇ ಜ್ವರವಿದ್ದರೂ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಮಲಗುವಾಗ ಸೊಳ್ಳೆ ಪರದೆ ಬಳಸಿ ಎಂದರು.


ನಗರಾದ್ಯಂತ ಜಾಗೃತಿ ರಥ ಯಾತ್ರೆ ಸಂಚರಿಸಿ ಜಾಗೃತಿ ಮೂಡಿಸಿತು. ವಾಹನವು ಎರಡು ತಿಂಗಳವರೆಗೆ ಜಿಲ್ಲಾದ್ಯಂತ ಸಂಚರಿಸಿ ಪ್ರಚಾರ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರ, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ.ಪ್ರಕಾಶ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಂದಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ರಾಮಾಂಜನೇಯ ಹಾಗೂ ಡಾ.ರಚನಾ, ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಗಂಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net