

ಹಾಸನ : ರಾಜ್ಯ ವಿವಿಧ ಜಿಲ್ಲೆಗಳಲ್ಲಿ ಸಂವಿಧಾನ ಕರ್ತೃ ಡಾ. ಬಿ.ಆರ್ ಅಂಬೇಡ್ಕರ್ ಭೇಟಿ ನೀಡಿದ ಐತಿಹಾಸಿಕ ಸ್ಥಳದಲ್ಲಿ ಸ್ಮಾರಕ ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಮೇಜರ್ ಪಿ. ಮಣಿವಣ್ಣನ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಂಗಳವಾರ ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಭೇಟಿ ನೀಡಿದ್ದ ಕರ್ನಾಟಕ ರಾಜ್ಯದ 10 ಊರುಗಳಲ್ಲಿ ಸ್ಮಾರಕ, ವಸ್ತು ಸಂಗ್ರಹಾಲಯ, ಸಂಶೋಧನಾ ಕೇಂದ್ರಗಳನ್ನು ಅಭಿವೃದ್ಧಿ ಮಾಡುವ ಸಂಬಂಧದ ಕುರಿತು ವೀಡಿಯೋ ಸಂವಾದದ ಮೂಲಕ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ಮಾತಾಡಿದ ಅವರು ಸ್ಮಾರಕ ಭವನ ನಿರ್ಮಾಣ ಮಾಡಲು ಹಾಸನ ಜಿಲ್ಲೆಗೆ 2020-21 ನೇ ಬಜೆಟ್‌ನಲ್ಲಿ 1 ಕೋಟಿ ಅನುದಾನ ಮೀಸಲಿಟಿದ್ದು, ಈಗಾಗಲೇ 50 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಅರ್ಚನ ಮಾತನಾಡಿ ಡಾ. ಬಿ.ಆರ್ ಅಂಬೇಡ್ಕರ್ ಜಿಲ್ಲೆಯ 2 ಸ್ಥಳಗಳಿಗೆ ಭೇಟಿ ನೀಡಿದ್ದು, 1954 ರಲ್ಲಿ ನಗರದ ಎ.ಕೆ ಬೋರ್ಡಿಂಗ್ ಹೋಂ ಸಂಸ್ಥೆಗೆ ಭೇಟಿ ನೀಡಿದ್ದು, ಈ ಸ್ಥಳದಲ್ಲಿ ವಸ್ತು ಸಂಗ್ರಹಾಲಯ, ಸ್ಮಾರಕಭವನ, ಸ್ಟಡಿ ಸೆಂಟರ್, ನಿರ್ಮಾಣ ಮಾಡಲು ಯೋಜನೆ ರೂಪಿಸಿ ಕಳುಹಿಸಲಾಗುವುದು ಎಂದರು.
70 ವರ್ಷಗಳ ಹಿಂದೆ ಮೈಸೂರಿನಿಂದ ಹಾಸನಕ್ಕೆ ಪ್ರಯಾಣ ಮಾಡುವ ಸಮಯದಲ್ಲಿ ಹೊಳೆನರಸೀಪುರದ ಹಳೇ ರೈಲ್ವೇ ನಿಲ್ದಾಣದಲ್ಲಿ ಇಳಿದಿದ್ದು ಅಲ್ಲಿ ಸ್ಮಾರಕ ನಿರ್ಮಾಣಕ್ಕೆ ನಿವೇಶನ ಹುಡಕುಲಾಗುತ್ತಿದ್ದು, ನಿವೇಶನ ಸಿಕ್ಕಿದ ಕೂಡಲೇ ಅನುದಾನ ಬಿಡುಗಡೆಗಾಗಿ ಯೋಜನೆ ರೂಪಿಸಿ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದರು.
ವೀಡಿಯೋ ಸಂವಾದದಲ್ಲಿ ಸಮಾಜಕಲ್ಯಾಣ ಇಲಾಖೆ ಆಯುಕ್ತ ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಂಜುನಾಥ್, ಮತ್ತಿತರರು ಹಾಜರಿದ್ದರು.