

ಬೆಂಗಳೂರು: ಶ್ರೀಸಂಸ್ಥಾನ ರಾಮಚಂದ್ರಪುರದ ಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಂದ ರಚಿತವಾದ ‘ಭಾವರಾಮಾಯಣ ರಾಮಾವತರಣ’ ಕೃತಿ ಜೂ.29 ರಂದು ಲೋಕಾರ್ಪಣೆಯಾಗಲಿದೆ ಎಂದು ಹವ್ಯಕ ಮಹಾಮಂಡಲ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ತಿಳಿಸಿದರು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾರಸ್ವತ ಲೋಕದಲ್ಲೇ ಅತ್ಯಂತ ವಿಶಿಷ್ಟ ಎನಿಸಿದ ಮತ್ತು ಬಿಡುಗಡೆಗೆ ಮುನ್ನವೇ ಆರು ಮರು ಮುದ್ರಣಗಳನ್ನು ಕಂಡಿರುವ ರಾಮಾವತರಣ ಕೃತಿಯ ಲೋಕಾರ್ಪಣೆಯು ನಗರದ ಹೊಸಕೆರೆಹಳ್ಳಿ ಪಿಇಎಸ್ ವಿಶ್ವವಿದ್ಯಾಲಯದ ಜಿ.ಜೆ.ಬಿ.ಸಿ ಸಭಾಂಗಣದಲ್ಲಿ ೨೯ ರ ಸಂಜೆ ೫ ಗಂಟೆಗೆ ನೆರವೇರಲಿದೆ. ಈ ಸಮಾರಂಭದಲ್ಲಿ ಮಂತ್ರಾಲಯ ಮಠದ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರತೀರ್ಥ ಶ್ರೀಪಾದಂಗಳವರು ಮತ್ತು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಹಾಗೂ ಪಿಇಎಸ್ ವಿವಿ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಉಪಸ್ಥಿತರಿರುತ್ತಾರೆ. ಜತೆಗೆ ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ೧೦೮ಕ್ಕೂ ಹೆಚ್ಚು ಗಣ್ಯರು ಏಕಕಾಲದಲ್ಲಿ ಈ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ ಎಂದರು.
ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿಯವರು, ಮೂಲ ವಾಲ್ಮೀಕಿ ರಾಮಾಯಣದ ಸಮಗ್ರ ಭಾವವನ್ನು ಸೆರೆ ಹಿಡಿಯುವ ಜತೆಗೆ ಅತ್ಯಂತ ಸರಳ ಭಾಷೆಯಲ್ಲಿ ಎಳೆ ಎಳೆಯಾಗಿ ವಿಶ್ಲೇಷಿಸುವ ಮೂಲಕ, ರಾಮಾಯಣದ ಹೊಸ ಹೊಳಹುಗಳನ್ನು ಪರಿಚಯಿಸಿದ್ದಾರೆ. ಜನಸಾಮಾನ್ಯರು ರಾಮಾಯಣದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ನಿಜ ಅರ್ಥದ ರಾಮರಾಜ್ಯ ಸ್ಥಾಪನೆಯಾಗಬೇಕು ಎನ್ನುವುದು ಕೃತಿಯ ಮೂಲ ಆಶಯವಾಗಿದೆ ಎಂದು ಹೇಳಿದರು.
ಜೀವನದುದ್ದಕ್ಕೂ ರಾಮಾಯಣ ಅನುಸಂಧಾನದಲ್ಲಿ ತೊಡಗಿರುವ ಶ್ರೀಗಳ ಧಾರಾ ರಾಮಾಯಣ, ರಾಮಕಥೆಯಂಥ ಪ್ರವಚನ ಮಾಲಿಕೆಯ ಬಳಿಕ, ಇದೀಗ ಭಾವ ರಾಮಾಯಣ ಕೃತಿ ಸರಣಿ ಅಕ್ಷರಪ್ರೇಮಿಗಳಿಗೆ ರಾಮಾಯಣದ ಅಮರಕೋಶವಾಗಲಿದೆ. ವಾಲ್ಮೀಕಿ ರಾಮಾಯಣದ ಮೂಲಸ್ವರೂಪಕ್ಕೆ ಎಳ್ಳಷ್ಟೂ ಧಕ್ಕೆಯಾಗದಂತೆ, ಮಕ್ಕಳೂ ಅರ್ಥ ಮಾಡಿಕೊಳ್ಳುವಷ್ಟು ಸರಳ, ಸುಂದರ ನಿರೂಪಣೆ ಬೆರಗುಗೊಳಿಸುವಂಥದ್ದು. ಸಾಹಿತ್ಯ ಅಭಿರುಚಿ ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಕೃತಿ ಲೋಕಾರ್ಪಣೆಗೆ ಮುನ್ನವೇ ಆರು ಸಾವಿರ ಪ್ರತಿಗಳು ಮಾರಾಟವಾಗಿರುವುದು ಈ ಅಮೂಲ್ಯ ಗ್ರಂಥದ ಮಹತ್ವವನ್ನು ಸಾರುತ್ತದೆ.
ಈ ಕಾರ್ಯಕ್ರಮದಲ್ಲಿ ಕಲಾಸ್ನೇಹಿ ಮತ್ತು ನರ್ತನಯೋಗ ಸಂಸ್ಥೆಯ ನಿರ್ದೇಶಕರಾದ ಸ್ನೇಹಾ ನಾರಾಯಣ ಮತ್ತು ಯೋಗೀಶ್ ಕುಮಾರ್ ಅವರಿಂದ ಭರತನಾಟ್ಯ, ಶ್ರೀಸಂಸ್ಥಾನದವರೊಂದಿಗೆ ಸಂವಾದ, ಮಂತ್ರಾಲಯ ಶ್ರೀಗಳ ಆಶೀರ್ವಚನ ಇರುತ್ತದೆ. ನಾಡಿನ ಮೂಲೆ ಮೂಲೆಗಳಿಂದ ಆಗಮಿಸುವ ಎರಡು ಸಾವಿರಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಈ ವಿಶಿಷ್ಟ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ವಿವರಿಸಿದರು.
ಕೃತಿಯನ್ನು ಪ್ರಕಟಿಸಿದ ಸಾವಣ್ಣ ಪಬ್ಲಿಕೇಶನ್ಸ್ನ ಮಾಲೀಕರಾದ ಜಮೀಲ್ ಸಾವಣ್ಣ ಮಾತನಾಡಿ, ಈ ಅಮೂಲ್ಯ ಕೃತಿಯಲ್ಲಿ ಶ್ರೀಗಳು ಸಾರಿರುವ ಮೌಲ್ಯಗಳು ಜಾತಿ-ಧರ್ಮಗಳ ಎಲ್ಲೆಯನ್ನು ಮೀರಿದ್ದು. ಇಡೀ ಸಮಾಜಕ್ಕೆ ಇದರ ಲಾಭ ಸಿಗಬೇಕು ಎಂಬ ಮಹದುದ್ದೇಶದಿಂದ ಈ ಕೃತಿಯನ್ನು ನಮ್ಮ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಈ ಕೃತಿಗೆ ಲೋಕಾರ್ಪಣೆಗೆ ಮುನ್ನವೇ ಅದ್ಭುತ ಸ್ಪಂದನೆ ದೊರಕಿದ್ದು, ಆರು ಮುದ್ರಣಗಳನ್ನು ಕಂಡ ಪುಸ್ತಕದ ಏಳನೇ ಮುದ್ರಣಕ್ಕೆ ಸಿದ್ಧತೆ ನಡೆದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಖ್ಯಾತ ಲೇಖಕ ಜಗದೀಶ್ ಶರ್ಮಾ ಸಂಪ, ಶ್ರೀಮಠದ ಮಾಧ್ಯಮ ಸಂಯೋಜಕ ಉದಯಶಂಕರ ಭಟ್ ಮಿತ್ತೂರು, ವಿತ್ತಾಧಿಕಾರಿ ಜೆ.ಎಲ್.ಗಣೇಶ್, ರಾಮಾಶ್ರಮ ಸೇವಾ ಸಮಿತಿ ಅಧ್ಯಕ್ಷ ರಮೇಶ್ ಹೆಗಡೆ ಉಪಸ್ಥಿತರಿದ್ದರು.