ಜಿಲ್ಲೆಯ ಕೆರೆಗಳಲ್ಲಿ ನೀರು ಖಾಲಿ / ಅಂತರ್ಜಲ ಕುಸಿತದ ಆತಂಕ / ಕುಡಿಯಲು ಮತ್ತು ಜಾನುವಾರುಗಳಿಗೆ ನೀರಿನ ಅಭಾವ ಸಾಧ್ಯತೆ!

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕೆರೆಗಳ ನಾಡು ಎಂದು ಕರೆಯುವ ಕೋಲಾರ ಜಿಲ್ಲೆಯಲ್ಲಿ ಬೇಸಿಗೆ ಪ್ರಾರಂಭದ ಹಂತದಲ್ಲಿಯೇ ಕೆರೆಗಳಲ್ಲಿ ನೀರು ಬರಿದಾಗಿದ್ದು, ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಮುಂದಿನ ಬೇಸಿಗೆಯನ್ನು ಯಾವ ರೀತಿ ಎದುರಿಸುವುದು ಎಂಬುದು ರೈತರಲ್ಲಿ ಆತಂಕದ ಮಾತಾಗಿದೆ.

ಕೋಲಾರ ಜಿಲ್ಲೆಯಲ್ಲಿ ೨೫೨೦ ಕೆರೆಗಳಿದ್ದು, ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುವ ೧೩೮ ಕೆರೆಗಳು, ಪಂಚಾಯತ್‌ರಾಜ್ ಇಲಾಖೆಯ ವ್ಯಾಪ್ತಿಗೆ ೨೩೮೨ ಕೆರೆಗಳಿದ್ದು, ಇದರ ಜೊತೆಗೆ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ವ್ಯಾಪ್ತಿಗೆ ಕೋಲಾರ ನಗರದ ಅಮ್ಮೇರನಹಳ್ಳಿ ಮತ್ತು ಬೇತಮಂಗಳ ಕೆರೆಗಳು ಸೇರಲಿವೆ.

ಕೆ.ಸಿ.ವ್ಯಾಲಿಯ ಮೊದಲನೇ ಫೇಸ್‌ನಲ್ಲಿ ೧೪೬ ಕೆರೆಗಳಿಗೆ ನೀರು ಹರಿಸಲಾಗಿತ್ತು. ೨ನೇ ಫೇಸ್‌ನಲ್ಲಿ ೨೭೨ ಕೆರೆಗಳಿಗೆ ನೀರು ಹರಿಸಲು ಪೈಪ್ ಲೈನ್ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಮೊದಲನೇ ಹಂತದಲ್ಲಿ ಕಳೆದ ೨ ವರ್ಷಗಳ ಹಿಂದೆ ಕೆ.ಸಿ.ವ್ಯಾಲಿ ನೀರು ೧೪೬ ಕೆರೆಗಳಿಗೆ ನೀರು ಹರಿಸಲಾಗಿತ್ತು. ಆಗ ಜಿಲ್ಲೆಯು ಮಳೆಯು ಚೆನ್ನಾಗಿ ಆದ ಕಾರಣ ಮಳೆ ನೀರಿನ ಜೊತೆಗೆ ಕೆ.ಸಿ.ವ್ಯಾಲಿ ನೀರು ತುಂಬಿ ಕೆರೆಗಳು ಕೋಡಿ ಹರಿದವು. ಇದರ ಜೊತೆಗೆ ಉಳಿದ ಕೆರೆಗಳು ಕೋಡಿ ಹರಿದಿತ್ತು.

ಕಳೆದ ೨ ವರ್ಷಗಳಿಂದ ಜಿಲ್ಲೆಯಲ್ಲಿ ಸರಿಯಾಗಿ ಮಳೆಯಾಗದ ಕಾರಣ ಕೆ.ಸಿ.ವ್ಯಾಲಿ ನೀರು ಹರಿಯುವ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಜಿಲ್ಲೆಯಾದ್ಯಂತ ಶೇ.೮೦ ರಷ್ಟು ಕೆರೆಗಳಲ್ಲಿ ನೀರು ಖಾಲಿಯಾಗಿದೆ. ಕೆ.ಸಿ.ವ್ಯಾಲಿ ನೀರು ಕೋಲಾರ ತಾಲ್ಲೂಕು ಮತ್ತು ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ಹಾಗೂ ಮಾಲೂರು ತಾಲ್ಲೂಕಿನ ಕೆಲವು ಕೆರೆಗಳಲ್ಲಿ ಮಾತ್ರ ಶೇ.೨೦ ರಷ್ಟು ಇದ್ದು, ಉಳಿದಂತೆ ಮುಳಬಾಗಿಲು, ಕೆಜಿಎಫ್., ಬಂಗಾರಪೇಟೆ, ಶ್ರೀನಿವಾಸಪುರ ತಾಲ್ಲೂಕಿನ ಬಹುತೇಕ ಕೆರೆಗಳಲ್ಲಿ ನೀರು ಬರಿದಾಗಿದೆ.

ಇದರಿಂದಾಗಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ. ಕುಡಿಯುವ ನೀರಿಗು ಮುಂದಿನ ಬೇಸಿಗೆಯಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದ್ದು, ವಿಜಯವಾಣಿಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮುಳಬಾಗಿಲು ತಾಲ್ಲೂಕಿನಲ್ಲಿ ೩೪ ಕ್ಕೂ ಹೆಚ್ಚು ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದ್ದು, ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಅಂತರ್ಜಲ ಕುಸಿದಿರುವ ಬಗ್ಗೆ ಮಾಹಿತಿ ಲಭ್ಯವಾಗಬೇಕಾಗಿದೆ ಎಂದು ಜಿಲ್ಲಾಪಂಚಾಯತ್ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕಳೆದ ೨ ವರ್ಷಗಳಿಂದ ಯಾವುದೇ ಬೆಳೆಗಳಿಲ್ಲದೆ ನಷ್ಟ ಅನುಭವಿಸಿದ್ದ ರೈತರು ಜೂನ್‌ನಿಂದ ಪ್ರಾರಂಭವಾಗುವ ಟೊಮೆಟೋ ಸುಗ್ಗಿಗೆ ಟೊಮೆಟೋ ಸಸಿಗಳನ್ನು ನಾಟಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈಗಾಗಲೇ ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿಯುತ್ತಿರುವುದರಿಂದ ಟೊಮೆಟೋ ಸುಗ್ಗಿಯನ್ನು ಯಾವ ರೀತಿ ಎದುರಿಸುವುದು ಎಂಬುದು ರೈತರಲ್ಲಿ ಆತಂಕ ಉಂಟಾಗಿದೆ.

ಕಳೆದ ೧೫ ದಿನಗಳಿಂದ ಬಿಸಿಲಿನ ತಾಪಮಾನ ದಿನೇ ದಿನೇ ಹೆಚ್ಚಾಗತೊಡಗಿದ್ದು, ಬೇಸಿಗೆ ಪ್ರಾರಂಭದಲ್ಲಿ ಬಿಸಿಲಿನ ತಾಪಮಾನ ಈ ರೀತಿ ಇರುವಾಗ ಮಾರ್ಚ್ ಏಪ್ರಿಲ್ ತಿಂಗಳು ಕಳೆಯುವುದು ಹೇಗೆ ಎಂಬುದು ಆಂತಕ ಶುರುವಾಗಿದ್ದು, ಕುಡಿಯಲು ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

ಕೋಟ್

ನೀರಿನ ಸಮಸ್ಯೆಯನ್ನು ನಿವಾರಿಸಲು ಜಿಲ್ಲಾಪಂಚಾಯತ್ ಇಲಾಖೆ ಸಿದ್ಧವಾಗಿದ್ದು, ಈಗಾಗಲೇ ಅಂಜತರ್ಜಲ ಕುಸಿದಿರುವ ಕೊಳವೆ ಬಾವಿಗಳ ಪಟ್ಟಿ ತಯಾರಿಸಲಾಗುತ್ತಿದೆ. ಹೊಸದಾಗಿ ಬೋರು ಕೊರೆಯಲು ಸರ್ಕಾರದಿಂದ ಅನುಮತಿ ಇಲ್ಲ. ಕೊಳವೆ ಬಾವಿಯ ಆಳವನ್ನು ರೀ ಡ್ರಿಲ್ಲಿಂಗ್ ಮಾಡಿಸಬಹುದು. ಓಬಿರಾಯನ ಕಾಲದ ಪಂಪು ಮೋಟಾರು ಬದಲಾಯಿಸಲು ಅವಕಾಶವಿದೆ. ಇದರ ಜೊತೆಗೆ ಖಾಸಗಿ ಕೊಳವೆ ಬಾವಿಗಳನ್ನು ಗುತ್ತಿಗೆ ಪಡೆದು ಅದರ ಮೂಲಕ ನೀರು ಕೊಡುವ ಕೆಲಸ ಮಾಡಲಾಗುವುದು. ಕೊನೆಯದಾಗಿ ಟ್ಯಾಂಕರ್ ಮೂಲಕ ನೀರು ಕೊಡುವ ವ್ಯವಸ್ಥೆಯನ್ನು ಮಾಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

-ಬಿ.ಶಿವಕುಮಾರ್, ಉಪಕಾರ್ಯದರ್ಶಿ, ಜಿಲ್ಲಾಪಂಚಾಯತ್.

ಕೋಟ್

ಕೆರೆಗಳಲ್ಲಿ ಈಗಾಗಲೇ ಶೇ.೮೦ ರಷ್ಟು ನೀರು ಖಾಲಿಯಾಗಿದೆ. ಕೆ.ಸಿ.ವ್ಯಾಲಿ ಹರಿಯುವ ನೀರಿನ ಕೆರೆಗಳಲ್ಲಿ ಹೊರತುಪಡಿಸಿದರೆ ಮಳೆ ನೀರು ಹರಿಯುವ ಕೆರೆಗಳಲ್ಲಿ ನೀರು ಬರಿದಾಗಿದೆ. ಪ್ರಸ್ತುತ ಅಂತರ್ಜಲಮಟ್ಟ ಕುಸಿದಿಲ್ಲ. ಮಾರ್ಚ್ ತಿಂಗಳಲ್ಲಿ ಕುಸಿಯಬಹುದು. ಕಳೆದ ವರ್ಷದ ಬೇಸಿಗೆಯಲ್ಲಿ ೧.೬ ಮೀಟರ್ ಅಷ್ಟು ಅಂತರ್ಜಲ ಕುಸಿದಿತ್ತು. ಆದರೆ ನೀರಿನ ಅಭಾವ ಕಂಡುಬರಲಿಲ್ಲ. ಮುಂದಿನ ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ಅಂತರ್ಜಲ ಕುಸಿಯುತ್ತದೆಯೋ ಕಾದು ನೋಡಬೇಕಾಗಿದೆ.

-ಹರಿಕೃಷ್ಣ, ಎಇಇ, ಸಣ್ಣ ನೀರಾವರಿ ಇಲಾಖೆ.

ಚಿತ್ರ ೨೮ ಕೆ.ಎಲ್.ಆರ್. ೦೧ : ಬಿ.ಶಿವಕುಮಾರ್, ಉಪಕಾರ್ಯದರ್ಶಿ, ಜಿಲ್ಲಾಪಂಚಾಯತ್. ರವರ ಭಾವಚಿತ್ರ

ಚಿತ್ರ ೨೮ ಕೆ.ಎಲ್.ಆರ್. ೦೧ಎ : ಹರಿಕೃಷ್ಣ, ಎಇಇ, ಸಣ್ಣ ನೀರಾವರಿ ಇಲಾಖೆ. ರವರ ಭಾವಚಿತ್ರ

ಚಿತ್ರ ೨೮ ಕೆ.ಎಲ್.ಆರ್. ೦೧ಬಿ : ನೀರು ಬರಿದಾಗಿರುವ ಕೆರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net