ಜಿಲ್ಲೆಯ ಎಲ್ಲೆಡೆ ಸಂಭ್ರಮದ ಸಂಕ್ರಾಂತಿ ಹಬ್ಬದ ಸಂಭ್ರಮ:ಖರೀದಿಗೆ ಸಾರ್ವಜನಿಕರ ಉತ್ಸಾಹ

ಜಿಲ್ಲೆಯ ಎಲ್ಲೆಡೆ ಸಂಭ್ರಮದ ಸಂಕ್ರಾಂತಿ ಹಬ್ಬದ ಸಂಭ್ರಮ:ಖರೀದಿಗೆ ಸಾರ್ವಜನಿಕರ ಉತ್ಸಾಹ
Published on

ಹಾಸನ: ನಗರದ ಕಟ್ಟಿನಕೆರೆ ಮಾರುಕಟ್ಟೆ, ಮಹಾವೀರ ವೃತ್ತ, ರೈಲ್ವೆ ನಿಲ್ದಾಣ ಮುಂಭಾಗ, ಸ್ಲೇರ್ಸ್‌ ಹಾಲ್ ಸೇರಿ ನಗರದ ವಿವಿಧ ವೃತ್ತ ಸೇರಿ ಇನ್ನಿತರ ಸ್ಥಳಗಳಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಸಾರ್ವಜನಿಕರು ಉತ್ಸಾಹದಿಂದ ತೊಡಗಿದರು.
ಜಗತ್ತಿಗೆ ಬೆಳಕನ್ನು ನೀಡುವ ಸೂರ್ಯನು ಪಥ ಬದಲಿಸುವ ಹಬ್ಬವೇ ಸಂಕ್ರಮಣ ಅಥವಾ ಸಂಕ್ರಾಂತಿ. ಸಂಕ್ರಾಂತಿ ಕೃಷಿಕರಿಗೆ ಸುಗ್ಗಿ ಹಬ್ಬ, ಹೆಂಗಳೆಯರು ಎಳ್ಳು-ಬೆಲ್ಲ ಹಂಚಿ ಸಂತೋಷ ಪಡುವ ಹಬ್ಬವೂ ಹೌದು. ಹೀಗಾಗಿ ವಾತಾವರಣ. ಹಳ್ಳಿಗಳಲ್ಲಿ ರೈತನ ಸಂಗಾತಿ ರಾಸುಗಳನ್ನು ತೊಳೆದು ಕೊಂಬಿಗೆ ಬಣ್ಣ ಹಚ್ಚುವುದು, ಕಿಚ್ಚು ಹಾಯಿಸುವ ದೃಶ್ಯ ಮಾಮೂಲಿ. ಅದೇ ರೀತಿ ನಗರ ಪ್ರದೇಶಗಳಲ್ಲಿ ಬಣ್ಣದ ರಂಗೋಲಿ ಬಿಟ್ಟು, ಎಳ್ಳು-ಬೆಲ್ಲ ಹಂಚಿಕೆ ಮಾಡುವ ಸಡಗರ.
ನಗರದ ಮಾರುಕಟ್ಟೆಗಳಲ್ಲಿ ಕಬ್ಬು, ಗೆಣಸು, ಅವರೆಕಾಯಿಗಳ ಜೊತೆಗೆ, ಹಣ್ಣು-ಹೂಗಳ ಮಾರಾಟ ಜೋರಾಗಿ ನಡೆದಿದೆ. ಹಬ್ಬದ ಹಿನ್ನಲೆಯಲ್ಲಿ ಬೆಲೆ ಏರಿಕೆ ಆಗುತ್ತದೆ ಎಂಬ ಕಾರಣಕ್ಕೆ ಗ್ರಾಹಕರು ತಮ್ಮ ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಖರೀದಿಯಲ್ಲಿ ತೊಡಗಿದ್ದರು.ಸಾಮಾನ್ಯವಾಗಿ ಎಲ್ಲಾ ದಿನಸಿ ಅಂಗಡಿಗಳಲ್ಲೂ ಸಿದ್ಧಗೊಳಿಸಿದ ಎಳ್ಳು, ಬೆಲ್ಲದ ಪೊಟ್ಟಣಗಳಿಗೆ ಸಾಕಷ್ಟು ಬೇಡಿಕೆ ಕಂಡುಬಂತು. ಇನ್ನು ಕಬ್ಬಿನ ಜಲ್ಲೆಗೂ ಅಷ್ಟೆ ಬೇಡಿಕೆ ಇತ್ತು. ಹೂವು, ಹಣ್ಣು, ತರಕಾರಿ ವ್ಯಾಪಾರ-ವಹಿವಾಟು ಉತ್ತಮವಾಗಿಯೇ ನಡೆಯಿತು.
ಪ್ರಮುಖ ರಸ್ತೆಗಳ ಫುಟ್‌ಪಾತ್‌ಗಳಲ್ಲಿ ಕಬ್ಬಿನ ಜಲ್ಲೆಗಳು ರಾರಾಜಿಸುತ್ತಿದ್ದವು. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಕಬ್ಬು ಮಾರುಕಟ್ಟೆಯಲ್ಲಿ ಕಂಡುಬಂತು. ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮಾರುಕಟ್ಟೆಯಲ್ಲಿ ಜನರ ಓಡಾಟ ವಿರಳವಾಗಿತ್ತು. ಸಂಜೆ 4 ಗಂಟೆ ಬಳಿಕ ಜನರು ಮಾರುಕಟ್ಟೆಯತ್ತ ಧಾವಿಸಿ ಬಂದರು.
ಸಾಮಾಗ್ರಿಗಳ ದರ:
ಮಲ್ಲಿಗೆ ಹೂವು ಒಂದು ಮಾರಿಗೆ 140-160 ರೂ., ಕನಕಾಂಬರ 60-80 ರೂ. ಕಾಕಡ 40-60 ರೂ. ಚೆಂಡು 50 ರೂ.,
ಸೇವಂತಿಗೆ ಒಂದು ಮಾರಿಗೆ 50-60 ರೂ.ಗೆ ಮಾರಾಟವಾಯಿತು. ಕಬ್ಬು ಒಂದು ಜೋಡಿಗೆ 60 ರಿಂದ 80 ರೂ.ಗೆ ಮಾರಾಟವಾಯಿತು. ಸಿದ್ಧ ಎಳ್ಳು-ಬೆಲ್ಲ (ಕೆಜಿಗೆ) 150-200 ರೂ., ಗೆಣಸು ಪ್ರತಿ ಕೆ.ಜಿ.ಗೆ 40 ರೂ. ಹಾಗು ಕೆ.ಜಿ. ಅವರೆಕಾಯಿ 60 ರೂ.ಗೆ ಲಭ್ಯವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net