

ಹಾಸನ: ಬೇಲೂರು ಶ್ರೀ ಚೆನ್ನಕೇಶವ ದೇಗುಲ ಯುನೆಸ್ಕೋ ಪಟ್ಟಿಗೆ ಸೇರ್ಪಡೆಯಾಗಲು ಅಮರ ಶಿಲ್ಪಿ ಜಕ್ಕಣಚಾರಿ ಅವರ ವಾಸ್ತುಶಿಲ್ಪವೇ ಕಾರಣ. ಆದ್ದರಿಂದ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಹೇಳಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಸೋಮವಾರ ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಕಣಾಚಾರಿ ಅವರ ಕೆತ್ತನೆ ಎಂದೆಂದಿಗೂ ಅಮರವಾಗಿದ್ದು, ಯಾವ ಫಲಾಪೇಕ್ಷೆಗಳಿಲ್ಲದೇ ತಮ್ಮ ಇಡೀ ಜೀವನವನ್ನು ಕಲೆಗಾಗಿ ಮೀಸಲಿಟ್ಟಿರು.ಬೇಲೂರು, ಹಳೇಬೀಡೆಂಬ ಶಿಲ್ಪ ಕಲೆಗಳ ನಾಡಿನಲ್ಲಿ ಜನ್ಮ ತಾಳಿರುವ ನಾವೆಲ್ಲರೂ ಪುಣ್ಯವಂತರು ಎಂದು ಬಣ್ಣಿಸಿದರು.
ರಾಷ್ಟ್ರಕವಿ ಕುವೆಂಪು ಅವರು ಇಂತಹ ಸ್ಥಳಗಳಿಗೆ ಭೇಟಿ ನೀಡಿ ಅದ್ಭುತ ಸಾಹಿತ್ಯ ರಚನೆ ಮಾಡಿದ್ದಾರೆ. ಈ ಕಲೆಯನ್ನು ಕಂಡು ಬಾಗಿಲನು ತೆರೆದು ಒಳಗೆ ಬಾ ಯಾತ್ರಿಕನೆ, ಶಿಲೆಯಲ್ಲ ಈ ಗುಡಿಯು ಕಲೆಯ ಬಲೆಯು ಎಂದು ವರ್ಣಿಸಿದ್ದಾರೆ. ಕರ್ನಾಟಕ ಆಳಿದ ಅನೇಕ ರಾಜ ಮಹಾರಾಜರೂ ಸಹ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಜನ್ಮ ತಾಳಿರುವ ನಾವೇ ಧನ್ಯರು ಎಂದರು.
ನಾಡಿನಲ್ಲಿ ಅನೇಕ ಶಿಲ್ಪಿಗಳು ಬಂದು ಹೋಗಿದ್ದಾರೆ. ಆದರೆ, ಜಕಣಾಚಾರಿ ಅವರು ಅಮರ ಶಿಲ್ಪಿಗಳಾಗಿ ಉಳಿಯುತ್ತಾರೆ. ಬೇಲೂರು ಮತ್ತು ಹಳೇಬೀಡುನಲ್ಲಿರುವ ಶಿಲ್ಪಕಲೆಗಳು ಅದ್ಭುವಾಗಿದ್ದು, ಅದರ ಹಿಂದಿರುವ ಶಿಲ್ಪಿಗಳ ಶ್ರಮವನ್ನು ನಾವೆಲ್ಲ ಸ್ಮರಿಸಬೇಕು. ವಾಸ್ತುಶಿಲ್ಪ ನಿರ್ಮಾಣದಲ್ಲಿ ತಮ್ಮನ್ನು ತಾವು ಮರೆತು ಜ್ಞಾನ ಮತ್ತು ಕೌಶಲ್ಯ ಹಾಗು ಶಕ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯದ ಹಲವು ಭಾಗಗಳಲ್ಲಿ ತಿರುಗಿ ತಮ್ಮ ಕೈಚಳಕ ತೋರಿಸಿದ್ದಾರೆ. ಇವರ ಕೆತ್ತನೆಗೆ ಆಕರ್ಷಿತರಾಗಿ ರಾಜಾಧಿರಾಜರು ಅತ್ಯಂತ ಗೌರವದಿಂದ ಕಾಣುತ್ತಾರೆ ಎಂದರು.
ಇದೇ ವೇಳೆ ಅಮರ ಶಿಲ್ಪಿ ಜಕಣಾಚಾರಿ ಪ್ರತಿಮೆ ಜಿಲ್ಲೆಯಲ್ಲಿ ಎಲ್ಲೂ ಇಲ್ಲಿಯೂ ಇಲ್ಲ. ಹಾಸನ ನಗರದ ಮೂರು ವೃತ್ತಗಳಾದ ಎನ್.ಆರ್. ವೃತ್ತ, ಸಂತೆಪೇಟೆ ವೃತ್ತಗಳ ಪೈಕಿ ಒಂದರಲ್ಲಿ ಪ್ರತಿಮೆ ಮಾಡಲು ಅವಕಾಶ ಕೊಡುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಈ.ಕೃಷ್ಣೇಗೌಡ,ವಿಶ್ವಕರ್ಮ ಸಂಘದ ಅಧ್ಯಕ್ಷ ಜಿ. ಕುಮಾರ್, ಮಂಡ್ಯ ನಿಂಗಾಚಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರನಾಥ್, ರಾಘವಾಚಾರ್ ಇದ್ದರು.