ಚಾಮುಲ್ ಅಧ್ಯಕ್ಷನಾಗಿ ಉತ್ತಮ ಕೆಲಸ

IMG-20241227-WA0014
Published on

ಚಾಮರಾಜನಗರ: ಚಾಮುಲ್‌ ಅಧ್ಯಕ್ಷನಾಗಿ 2 ವರ್ಷ 2 ತಿಂಗಳ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇನೆ ಎಂದು ಚಾಮುಲ್‌ ಮಾಜಿ ಅಧ್ಯಕ್ಷ ವೈ.ಸಿ.ನಾಗೇಂದ್ರ ಹೇಳಿದರು.

ನಾನು ಅಧ್ಯಕ್ಷನಾದ ಸಂದರ್ಭದಲ್ಲಿ ಒಂದು ಲೀಟ‌ರ್ ಹಾಲಿಗೆ 26 ರೂ. ಇತ್ತು. ಆ ನಂತರ ಹಾಲಿನ ದರವನ್ನು 5 ಬಾರಿ ಏರಿಕೆ ಮಾಡಲಾಗಿದೆ. ಅಲ್ಲದೇ 40 ಸಾವಿರ ಲೀ. ಇದ್ದ ಹಾಲು ಉತ್ಪಾದನೆಯನ್ನು 60 ಸಾವಿರ ಲೀ.ಗೆ ಏರಿಕೆ ಮಾಡಲಾಗಿದೆ. ರೈತರ ಪರವಾಗಿ ನನ್ನ ಅವಧಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನನ್ನ ಅಧಿಕಾರವಧಿಯಲ್ಲಿ ಜಿಲ್ಲೆಯ ಹಾಲು ಉತ್ಪಾದಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ಅಲ್ಲದೇ ಕಾಲ ಕಾಲಕ್ಕೆ ಹಾಲು ಉತ್ಪಾದಕರಿಗೆ ಹಣ ನೀಡಲು ಕ್ರಮವಹಿಸಲಾಗಿತ್ತು. ನಾನು ಚಾಮುಲ್ ಅಧ್ಯಕ್ಷನಾಗಿ ಉತ್ತಮವಾಗಿ ಕೆಲಸ ಮಾಡಲು ಸಹಕರಿಸಿದ ಯಳಂದೂರು ತಾಲೂಕಿನ ಹಾಲು ಉತ್ಪಾದಕರು, ನನ್ನ ಆಯ್ಕೆಗೆ ಕಾರಣೀಭೂತರಾದ ಬಿಜೆಪಿ ಪಕ್ಷದ ವರಿಷ್ಟರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ನನ್ನ ವಿರುದ್ಧ ಅವಿಶ್ವಾಸ ವಾತಾವರಣ ಇತ್ತು. ಇಳಿಕೆ ಮಾಡಿದ್ದ 1 ರೂ. ಹಾಲಿನ ದರವನ್ನು ಏರಿಕೆ ಮಾಡುವ ನಿಟ್ಟಿನಲ್ಲಿ ಮುಂದಾಗಿದ್ದೆ. ಆದರೆ, ಕೆಲವರು ಷಡ್ಯಂತ್ರ ನಡೆಸಿ ಸಭೆ ನಡೆಸದಂತೆ ಮಾಡಿದರು. ಇದರಿಂದ ರೈತರಿಗೆ ಅನಾನುಕೂಲವಾಗಿದೆ. ಮುಂದಿನ ದಿನಗಳಲ್ಲಿ ವ್ಯವಸ್ಥಾಪಕ ನಿರ್ದೇಶಕರು ಸಭೆ ಕರೆದು ಹಾಲಿನ ದರವನ್ನು 2-3 ರೂ. ಏರಿಕೆ ಮಾಡುವ ನಿರೀಕ್ಷೆ ಇದೆ ಎಂದರು.

ಚಾಮುಲ್‌ಗೆ ಸರ್ಕಾರದಿಂದ ಬರಬೇಕಾದ ಅನುದಾನ ಬಂದಿಲ್ಲ. ಇದರಿಂದಾಗಿ ಸಾಲ ಜಾಸ್ತಿ ಮಾಡಲಾಗಿದ್ದು ಬಡ್ಡಿ ಕಟ್ಟಲಾಗುತ್ತಿದೆ. ಹಾಲು ಮಾರಾಟ ಕೂಡ ಕಡಿಮೆ ಇದೆ. ಹಾಲು ಮಾರಾಟ ಜಾಸ್ತಿಯಾದರೆ ಒಕ್ಕೂಟಕ್ಕೆ ಲಾಭ ಬರುತ್ತದೆ. ಮುಂದಿನ ದಿನಗಳಲ್ಲಿ ಚಾಮುಲ್‌ ಅಧ್ಯಕ್ಷ ರಾಗುವವರಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net