ಗ್ರಾಹಕರಿಲ್ಲದೆ ಇಂದಿರಾ ಕ್ಯಾಂಟೀನ್​ ಸ್ಥಗಿತ!

h10-Indira Canteen
Published on

ಬೆಳಗಾವಿ: ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರಿಗೆ ಹೊಟ್ಟೆ ತುಂಬಿಸುವ ಉದ್ದೇಶದಿಂದ ಆರಂಭವಾಗಿ ರುವ ಇಂದಿರಾ ಕ್ಯಾಂಟೀನ್​ಗಳು ಸಮಸ್ಯೆಗಳಿಂದ ಬಳಲುತ್ತಿದ್ದು, ಗ್ರಾಹಕರು ಇಲ್ಲದೆ ಬಿಕೋ ಎನ್ನುತ್ತಿವೆ!.

ಹೌದು. ಗುಣಮಟ್ಟದ ಆಹಾರ, ಸ್ವಚ್ಛತೆ, ನಿರ್ವಹಣೆ ಕೊರತೆಯಿಂದ ಗಬ್ಬೆದ್ದು ನಾರುತ್ತಿರುವ ಇಂದಿರಾ ಕ್ಯಾಂಟೀನ್​ಗಳಲ್ಲಿ ಕಡಿಮೆ ದರದಲ್ಲಿ ಗುಣಮಟ್ಟದ ಬೆಳಗಿನ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟ ಲಭ್ಯವಿದ್ದರೂ ಕೂಲಿ ಕಾರ್ಮಿಕರು, ಬಡವರು ಬರಲು ಹಿಂದೇಟು ಹಾಕುತ್ತಿದ್ದಾರೆ. ಶುದ್ಧವಾದ ಕುಡಿಯುವ ನೀರು ಇಲ್ಲ. ಸರ್ಕಾರ ಕೋಟ್ಯಂತರ ರೂ. ಅನುದಾನ ವೆಚ್ಚ ಮಾಡಿದರೂ ಬಡವರಿಗೆ ಗುಣಮಟ್ಟದ ಆಹಾರ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕ್ಯಾಂಟೀನ್​ಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ.

ಕಳೆದ ಎರಡು ವರ್ಷಗಳಿಂದ ಅನುದಾನ, ನಿರ್ವಹಣೆ ಇತರೆ ಸಮಸ್ಯೆಗಳಿಂದ ಬಳಲುತ್ತಿರುವ ಇಂದಿರಾ ಕ್ಯಾಂಟೀನ್​ಗಳಿಗೆ ಗ್ರಾಹಕರು ಬಾರದಿದ್ದರೂ ಅಧಿಕಾರಿಗಳು, ಮಧ್ಯವರ್ತಿಗಳು ಮಾತ್ರ ಗ್ರಾಹಕರ ಹೆಸರಿನಲ್ಲಿ ವಾರ್ಷಿಕ ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಒಂದು ದಿನಕ್ಕೆ 20ರಿಂದ 30 ಜನರು ಬರುವುದು ಅಪರೂಪ. ಕೆಲ ಕ್ಯಾಂಟೀನ್​ಗಳು ಜನರಿಲ್ಲದೆ ಬಿಕೋ ಎನ್ನುತ್ತಿದೆ. ಹಾಗಾಗಿ ಮಧ್ಯಾಹ್ನ ಮಾಡಿದ ಅಡುಗೆಯನ್ನು ರಾತ್ರಿ ಉಪಯೋಗಿಸುತ್ತಿದ್ದಾರೆ. ಕಡಿಮೆ ದರ ಇದ್ದರೂ ಗುಣಮಟ್ಟ ಇಲ್ಲ. ಹಾಗಾಗಿ ಅಲ್ಲಿ ಊಟ, ಉಪಾಹಾರ ಸೇವಿಸುವುದನ್ನು ಬಿಟ್ಟಿದ್ದೇವೆ ಎನ್ನುತ್ತಾರೆ ಕಾರ್ಮಿಕರು, ಆಟೋ, ಗೂಡ್ಸ್​ ವಾಹನ ಚಾಲಕರು.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 6 ಇಂದಿರಾ ಕ್ಯಾಂಟೀನ್​ಗಳಿದ್ದು, ಪ್ರತಿನಿತ್ಯ 80 ಸಾವಿರ ರೂ. ವರೆಗೆ ಖರ್ಚು ಮಾಡುತ್ತಿದೆ. ಪ್ರತಿದಿನ ಒಬ್ಬ ವ್ಯಕ್ತಿಯ ಉಪಾಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನ ಸೇರಿ ಇಂದಿರಾ ಕ್ಯಾಂಟೀನ್​ 57 ರೂ. ದರ ನಿಗದಿಪಡಿದೆ. ಇದರಲ್ಲಿ ಗ್ರಾಹಕರು 25 ರೂ. ನೀಡಿದರೆ ಉಳಿದ 32 ರೂ. ಮಹಾನಗರ ಪಾಲಿಕೆ ಪಾವತಿಸುತ್ತಿದೆ. ಕೆಲವು ಕಡೆ ಬೆಳಗ್ಗೆ ಉಪಾಹಾರಕ್ಕೆ ಮಾತ್ರ ಹೆಚ್ಚಿನ ಜನರು ಬರುತ್ತಾರೆ.

ರಾತ್ರಿ ಜನರು ಬರುವುದು ಅಪರೂಪ. ರಸ್ತೆ ಬದಿ ಸಣ್ಣ ಹೋಟೆಲ್​ ಹೆಚ್ಚಾಗುತ್ತಿರುವುದರಿಂದ ಕ್ಯಾಂಟೀನ್​ಗಳಿಗೆ ಜನರು ಬಾರದಿರುವುದು. ಇತ್ತೀಚಿನ ದಿನಗಳಲ್ಲಿ ಇಂದಿರಾ ಕ್ಯಾಂಟೀನ್​ಗಳ ಕುರಿತು ಪ್ರಚಾರ, ಅರಿವು ಇಲ್ಲದಿರುವುದು ಸಮಸ್ಯೆಗೆ ಒಂದು ಪ್ರಮುಖ ಕಾರಣ ಎನ್ನಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಟ್ಯಂತರ ರೂ. ವೆಚ್ಚ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವೈದ್ಯಕಿಯ ವಿಜ್ಞಾನ ಸಂಸ್ಥೆ (ಜಿಲ್ಲಾ ಆಸ್ಪತ್ರೆ), ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಆವರಣ, ಕೆಎಂಎಫ್​ ಆವರಣ, ಗೋವಾವೇಸ್​ ಪಾಲಿಕೆಯ ಕಾಂಪ್ಲೆಕ್ಸ್​, ನಾಥ ಪೈ ವೃತ್ತ, ನೆಹರು ನಗರದ ಎಪಿಎಂಸಿ ರಸ್ತೆಯಲ್ಲಿ ಒಂದೊಂದು ಕ್ಯಾಂಟೀನ್​ ಹಾಗೂ ಕೆಎಂಎಫ್​ ಆವರಣದಲ್ಲಿಯೇ ಸಾಮೂಹಿಕ ಅಡುಗೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಕ್ಯಾಂಟೀನ್​ಗಳನ್ನು ನಿರ್ಮಿಸಲು ಸರ್ಕಾರವು 6.24 ಕೋಟಿ ರೂ. ವೆಚ್ಚ ಮಾಡಿತ್ತು.

ಕೋಟ್ಯಂತರ ರೂ. ವೆಚ್ಚ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವೈದ್ಯಕಿಯ ವಿಜ್ಞಾನ ಸಂಸ್ಥೆ (ಜಿಲ್ಲಾ ಆಸ್ಪತ್ರೆ), ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣ ಆವರಣ, ಕೆಎಂಎಫ್​ ಆವರಣ, ಗೋವಾವೇಸ್​ ಪಾಲಿಕೆಯ ಕಾಂಪ್ಲೆಕ್ಸ್​, ನಾಥ ಪೈ ವೃತ್ತ, ನೆಹರು ನಗರದ ಎಪಿಎಂಸಿ ರಸ್ತೆಯಲ್ಲಿ ಒಂದೊಂದು ಕ್ಯಾಂಟೀನ್​ ಹಾಗೂ ಕೆಎಂಎಫ್​ ಆವರಣದಲ್ಲಿಯೇ ಸಾಮೂಹಿಕ ಅಡುಗೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಈ ಕ್ಯಾಂಟೀನ್​ಗಳನ್ನು ನಿರ್ಮಿಸಲು ಸರ್ಕಾರವು 6.24 ಕೋಟಿ ರೂ. ವೆಚ್ಚ ಮಾಡಿತ್ತು.

|ಮಂಜುನಾಥ ಕೋಳಿಗುಡ್ಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net