ಗಿರಡ್ಡಿ ಗೋವಿಂದರಾಜ ವಿಮರ್ಶಾ ಪ್ರಶಸ್ತಿ ಪ್ರದಾನ

20 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಗಿರಡ್ಡಿ ಗೋವಿಂದರಾಜ ಪ್ರತಿಷ್ಠಾನ ವತಿಯಿಂದ ನೀಡುವ ರಾಜ್ಯ ಮಟ್ಟದ ಡಾ. ಗಿರಡ್ಡಿ ಗೋವಿಂದರಾಜ್ ವಿಮರ್ಶಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸೆ. 22ರಂದು ಇಲ್ಲಿನ ಸುವರ್ಣ ಸಾಂಸ್ಕೃತಿಕ ಸಮುಚ್ಚಯ ಭವನದಲ್ಲಿ ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಹಿರೇಮಠ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನ ಪ್ರಶಸ್ತಿಗೆ ಡಾ. ಮೇಟಿ ಮಲ್ಲಿಕಾರ್ಜುನ ಅವರ ‘ತರವಲ್ಲ ತಗಿ ನಿನ್ನ ತಂಬೂರಿ ಸ್ವರ’ ಕೃತಿ ಆಯ್ಕೆಯಾಗಿದೆ. ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ ಎಂದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಎಚ್.ಎಸ್. ರಾಘವೇಂದ್ರ ಅವರು ಸಾಂಸ್ಕೃತಿಕ ಓದು ಮತ್ತು ಕಲೆಗಳು ಕುರಿತು ವಿಶೇಷ ಉಪನ್ಯಾಸ ನೀಡುವರು. ಪ್ರಶಸ್ತಿ ಪುರಸ್ಕೃತ ಕೃತಿ ಕುರಿತು ಡಾ. ಟಿ. ಅವಿನಾಶ ಮಾತನಾಡುವರು. ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅಧ್ಯಕ್ಷತೆ ವಹಿಸಲಿದ್ದಾರೆ. ಸರೋಜಾ ಗಿರಡ್ಡಿ ಉಪಸ್ಥಿತರಿರುವರು ಎಂದರು.
ಪ್ರಶಸ್ತಿಗಾಗಿ ರಾಜ್ಯದ ವಿವಿಧ ಭಾಗಗಳಿಂದ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಸಾವಿರಕ್ಕೂ ಹೆಚ್ಚು ಕೃತಿಗಳು ಆಗಮಿಸಿದ್ದವು. ಡಾ. ಓ.ಎಲ್. ನಾಗಭೂಷಣಸ್ವಾಮಿ, ಡಾ. ವಿಕ್ರಮ ವಿಸಾಜಿ ಹಾಗೂ ಡಾ. ಗೀತಾ ವಸಂತ ಅವರ ಆಯ್ಕೆ ಸಮಿತಿ ಈ ಕೃತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದರು.
ರಾಘವೇಂದ್ರ ಪಾಟೀಲ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net