

ಚಾನರಾಜನಗರ : ಹನೂರು ತಾಲೂಕಿನಲ್ಲಿ ಇತ್ತೀಚೆಗೆ ಕರಡಿ ಹಾವಳಿ ಹೆಚ್ಚಾಗುತ್ತಿದ್ದು, ಭಾನುವಾರ ನಸುಕಿನ ಜಾವ ಕೌದಳ್ಳಿ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಮೂರು ದಿನಗಳ ಹಿಂದಷ್ಟೇ ತಾಲೂಕಿನ ಸಂದನಪಾಳ್ಯ ಗ್ರಾಮದ ಸಂತ ಅಂತೋಣಿ ಪ್ರೌಢಶಾಲೆಯ ಶಿಕ್ಷಕರ ಕೊಠಡಿಯೊಂದಕ್ಕೆ ಕರಡಿ ನುಗ್ಗಿ ಆಹಾರ ಪದಾರ್ಥಗಳನ್ನು ತಿಂದು ಹಾಕಿತ್ತು. ಬಳಿಕ ಮಾರ್ಟಳ್ಳಿ ಗ್ರಾಮಕ್ಕೂ ಲಗ್ಗೆ ಇಟ್ಟು ರಾತ್ರಿಯಿಡೀ ಗ್ರಾಮದ ಬೀದಿಗಳಲ್ಲಿ ಓಡಾಡಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಕೌದಳ್ಳಿ ಸರದಿಯಾಗಿದೆ.
ಕರಡಿ ಹಾವಳಿಗೆ ಬೇಸತ್ತಿರುವ ಗ್ರಾಮಸ್ಥರು ಅದನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒತ್ತಾಯಿಸಿದ್ದ ಪರಿಣಾಮ ಸಂದನಪಾಳ್ಯ ಗ್ರಾಮದ ಸಂತ ಅಂತೋಣಿ ಪ್ರೌಢಶಾಲೆಯ ಸಮೀಪದಲ್ಲಿ ಬೋನು ಇರಿಸಲಾಗಿದೆ.
ಆದರೆ, ಇದರ ನಡುವೆ ಕೌದಳ್ಳಿಯಲ್ಲಿ ಕಾಣಿಸಿಕೊಂಡಿರುವ ಕರಡಿ ಶ್ರೀ ಮಹದೇಶ್ವರ ದೇಗುಲ, ಅಯ್ಯಂಗಾರ್ ಬೇಕರಿ ಮುಂಭಾಗ ಹಾಗೂ ಶಾಲೆಯ ಆಸುಪಾಸಿನಲ್ಲಿ ಸಂಚರಿಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದು, ಅನಾಹುತ ಸಂಭವಿಸುವ ಮುನ್ನ ಕರಡಿ ಸೆರೆ ಹಿಡಿಯುವಂತೆ ಒತ್ತಾಯಿಸಿದ್ದಾರೆ.