ಕೋಳಿ ಫಾರಂ ಸ್ಥಾಪನೆಗೆ ವಿರೋಧ

CTD KOLI FORM STRIKE...
Published on

ಚಿತ್ರದುರ್ಗ: ತಾಲೂಕಿನ ಜೆಎನ್ ಕೋಟೆ ಗ್ರಾಮದಲ್ಲಿ ಅಂದಾಜು 40 ಎಕರೆ ವಿಸ್ತೀರ್ಣದಲ್ಲಿ ಅಂಧ್ರದ ಉದ್ಯಮಿಯೊಬ್ಬರು ಸ್ಥಾಪಿಸಲು ಉದ್ದೇಶಿಸಿರುವ ಕೋಳಿಫಾರಂಗೆ ವಿರೋಧ ವ್ಯಕ್ತಪಡಿಸಿ ರಾಜ್ಯರೈತ ಸಂಘದ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಪ್ರವಾಸಿ ಮಂದಿರದಿಂದ ಡಿಸಿ ಕಚೇರಿಯವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದ ರೈತರು, ಫಾರಂ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಇದಕ್ಕೆ ಗ್ರಾಪಂನಿಂದ ಅನುಮತಿ ಪಡೆದಿಲ್ಲ ಎಂದು ಆರೋಪಿಸಿದರು.

ನಾವು ಕುಕ್ಕುಟೋದ್ಯಮ ವಿರೋಧಿಗಳಲ್ಲ. ತಾಂತ್ರಿಕತೆ ಮೂಲಕ ಕೋಳಿ ಫಾರಂ ನಿರ್ವಹಣೆ ಮಾಡಬೇಕಿದೆ. ಉದ್ದೇಶಿತ ಫಾರಂ ಜೆ.ಎನ್. ಕೋಟೆ, ಕಸವನಹಳ್ಳಿ,ನರೇನ್‌ಹಾಳ್, ದೊಡ್ಡಸಿದ್ದವ್ವನಹಳ್ಳಿ ಗ್ರಾಮಗಳ ಕೇಂದ್ರ ಸ್ಥಾನವಾಗಿದೆ. ಫಾರಂ ಆರಂಭಿಸಿದರೆ ಕೆಟ್ಟ ವಾಸನೆ ಗ್ರಾಮೀಣ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಜೆಎನ್‌ಕೋಟೆ ಬಳಿ ಒಂದು ಕೋಳಿಫಾರಂ ಇದ್ದು, ಇದರ ಆರಂಭಕ್ಕೆ ರೈತರು ವಿರೋಧ ವ್ಯಕ್ತಪಡಿಸಿರಲಿಲ್ಲ. ಆದರೆ, ಈಗ ಫಾರಂನಿಂದ ಪರಿಸರ ಹಾಗೂ ಜನ ಜೀವನದ ಮೇಲೆ ಗಂಭೀರ ಪರಿಣಾಮಗಳಾಗುತ್ತಿವೆ. ಕೆರೆ ಕಲುಷಿತವಾಗಿದೆ. ನೊಣಗಳ ಹಾವಳಿ ಅಧಿಕವಾಗಿ, ತರಕಾರಿ, ಹೂ ಬೆಳೆಯದಂಥ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.

ಹಂಪಯ್ಯನಮಾಳಿಗೆ ಬಳಿ ಚಿತ್ರದುರ್ಗ ನಗರಸಭೆಯ ಘನತ್ಯಾಜ್ಯ ವಿಲೇವಾರಿ ಘಟಕವಿದೆ. ಇದರ ಕೆಟ್ಟ ವಾಸನೆ ಹಾಗೂ ನೊಣಗಳ ಹಾವಳಿಯಿಂದ ಸ್ಥಳೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಕೋಳಿಫಾರಂ ಸ್ಥಾಪನೆ ಸಂಬಂಧ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಜೆಎನ್ ಕೋಟೆ ಮತ್ತಿತರ ಗ್ರಾಮಗಳ ಗ್ರಾಮಸ್ಥರ ಅಹವಾಲು ಆಲಿಸಬೇಕೆಂದು ಆಗ್ರಹಿಸಿದರು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ.ಪಿ. ಭೂತಯ್ಯ, ಸಂಘದ ಜಿಲ್ಲಾಧ್ಯಕ್ಷ ಧನಂಜಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಬಸ್ತಿಹಳ್ಳಿ ಸುರೇಶ್‌ಬಾ ಬು, ಕಾಂತರೆಡ್ಡಿ, ಈಶ್ವರಪ್ಪ, ಜಗನ್ನಾಥ್, ಶಿವರುದ್ರಪ್ಪ, ಕೇಶವಪ್ಪ, ಪುರುಷೋತ್ತಮ, ಕಾಂತರಾಜ್, ಮಾರುತಿ, ಚಂದ್ರಶೇಖರ್, ಶಿವಶಂಕರಪ್ಪ, ಯಮುನೇಶ್,ತಿಪ್ಪೇಶ್, ಕಾರ್ತಿಕ್, ಚಂದ್ರಮೌಳಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net