ಕೇಂದ್ರ ಸರ್ಕಾರದ ಗಮನಕ್ಕೂ ತರುತ್ತೇವೆ: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

3-yadhuveer
Published on

ಮೈಸೂರಿನಲ್ಲೇ ಮಾದಕ ವಸ್ತುಗಳು ತಯಾರಾಗುತ್ತಿದ್ದದ್ದು ಬಹಳ ಗಂಭೀರವಾದ ಹಾಗೂ ಆಶ್ಚರ್ಯಕರ ಸಂಗತಿ. ಈ ವಿಷಯವನ್ನು ಕೇಂದ್ರದ ಗೃಹ ಸಚಿವಾಲಯದ ಗಮನಕ್ಕೂ ತರುತ್ತೇವೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಇಂತಹ ಚಟುವಟಿಕೆಗಳು ಭಾರತದ ಯಾವ ಮೂಲೆಯಲ್ಲಿಯೂ ನಡೆಯಬಾರದು. ಇದರಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಪೊಲೀಸ್‌ನವರಿಗೆ ಅವರದ್ದೇ ಆದ ಒತ್ತಡ ಇರುತ್ತದೆ. ಆದರೆ ಇಂತಹ ಗಂಭೀರವಾದ ವಿಚಾರಗಳನ್ನು ಪರಿಗಣಿಸಬೇಕಾಗಿರುವುದು ಅವರ ಜವಾಬ್ದಾರಿಯಾಗಿದೆ ಎಂದರು.

ನರಸಿಂಹರಾಜ ಕ್ಷೇತ್ರದಲ್ಲಿ ಗಾಂಜಾ ಬಗ್ಗೆ ಅನೇಕ ದೂರುಗಳು ಬರುತ್ತಿದೆ. ಅನೇಕ ಪಾರ್ಕ್‌ಗಳ ಹೆಸರನ್ನು ಸ್ಥಳೀಯರು ಡ್ರಗ್ಸ್ ಹೆಸರಿನಲ್ಲಿ ನಾಮಕರಣ ಮಾಡಿದ್ದಾರೆ. ಮೈಸೂರಿನಲ್ಲಿ ಇಂತಹ ವ್ಯವಸ್ಥೆ ಇರುವಾಗ ಕೇಂದ್ರದಿಂದ ಏನು ಕೆಲಸ ಮಾಡಬೇಕೋ ಅದನ್ನು ಮಾಡುತ್ತೇವೆ. ಆದರೆ ಇದು ಪೊಲೀಸ್ ಇಲಾಖೆ, ರಾಜ್ಯ ಸರ್ಕಾರದ ಹೊಣೆಯಾಗಿದೆ ಎಂದರು.

ಪೊಲೀಸರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರ ವ್ಯವಸ್ಥೆಗೆ ವಿಶ್ವಾಸ, ಶಕ್ತಿ ತುಂಬಿ ಒಳ್ಳೆಯ ಸೌಲಭ್ಯ ನೀಡಿ ಇಂತಹ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸುವ ಟೆಕ್ನಾಲಜಿಯನ್ನು ಕೊಡಬೇಕಾಗಿರುವುದು ಅವಶ್ಯ ಎಂದು ಹೇಳಿದರು.

ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳ ಧಮ್ಕಿ ಹಾಕಿದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಸೋಷಿಯಲ್ ಮೀಡಿಯಾದಲ್ಲಿ ನಾನು ಸೇರಿದಂತೆ ಎಲ್ಲರೂ ಅಂತಹ ಟೀಕೆಗಳನ್ನು ಅನುಭವಿಸಿದ್ದೇನೆ. ಸಾಮಾಜಿಕ ಜಾಲತಾಣದಲ್ಲಿ ಎಲ್ಲೋ ಕುಳಿತುಕೊಂಡು ಕಮೆಂಟ್ ಹಾಕುತ್ತಾರೆ. ಅಂತಹವರಿಗೆ ಏನು ಮಾಡೋಕಾಗುತ್ತೆ? ನಾವು ನಮ್ಮ ಕೆಲಸ ಮಾಡಿಕೊಂಡು ಹೋಗಬೇಕು. ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯ ವಿಚಾರಣೆ ಮಾಡುತ್ತಿದೆ. ತೀರ್ಪು ಕೊಡುವತನಕ ನಾವು ಯಾರು ಅದಕ್ಕೆ ಪ್ರತಿಕ್ರಿಯೆ ನೀಡಬಾರದು ಎಂದರು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಿಎಂ ಸಿದ್ದರಾಮಯ್ಯ ಹೋಲಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಂಸದರು, ನಾಯಕತ್ವ ಇರೋದು ಕೆಲಸ ಮಾಡೋಕೆ, ಹೋಲಿಕೆ ಮಾಡೋದಕ್ಕೆ ಅಲ್ಲ. ನಾನು ಸಂಸದನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ. ನನ್ನ ಹಿಂದಿನವರು ಏನು ಮಾಡಿದ್ದರೂ ಅದನ್ನು ನಾನು ಹೋಲಿಕೆ ಮಾಡಲ್ಲ. ನನ್ನ ಆಲೋಚನೆಗಳ ಪ್ರಕಾರ, ಸರ್ಕಾರದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಯತೀಂದ್ರ ಹೇಳಿಕೆ ಖಂಡಿಸಿ ಪ್ರತಿಭಟನೆಗಳು ಆಗ್ತೀವೆ. ಕ್ಷಮೆ ಕೇಳುವಂತೆ ಆಗ್ರಹ ವ್ಯಕ್ತವಾಗುತ್ತಿದೆ. ಕ್ಷಮೆ ಕೇಳೋದು, ಬಿಡೋದು ಅವರಿಗೆ ಬಿಟ್ಟಿದ್ದು. ಜನರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅವರೇ ಉತ್ತರ ಕೊಡುತ್ತಾರೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net