ಕೆರೆ ತುಂಬಿಸುವ ಯೋಜನೆ ಆರಂಭ ಶೀಘ್ರ

Balat
ಕಮಲನಗರ ತಾಲೂಕಿನ ಬಳತ್(ಬಿ)ದಲ್ಲಿ ಕೆರೆ ತುಂಬಿಸುವ ಯೋಜನೆ ಮಾಹಿತಿ ಪಡೆಯುತ್ತಿರುವ ಶಾಸಕ ಪ್ರಭು ಚವ್ಹಾಣ್. ಜ್ಞಾನೇಶ್ವರ ಮಂಡೆ, ಸಂಜುಕುಮಾರ ಹಳ್ಳೆ, ಕಿರಣ ಪಾಟೀಲ್, ರಾಮಶೆಟ್ಟಿ ಪನ್ನಾಳೆ ಇತರರಿದ್ದರು.
Published on

ಕಮಲನಗರ: ಕ್ಷೇತ್ರದ ಕೆರೆಗಳ ತುಂಬಿಸುವ ಯೋಜನೆಯನ್ನು ಶೀಘ್ರದಲ್ಲಿ ಆರಂಭಿಸಲಾಗುವುದು ಎಂದು ಶಾಸಕ ಪ್ರಭು ಚವ್ಹಾಣ್ ಹೇಳಿದರು.

ತಾಲೂಕಿನ ಬಳತ್(ಬಿ) ಗ್ರಾಮದ ವ್ಯಾಪ್ತಿಯಲ್ಲಿ ಸೋಮವಾರ ಸಂಚರಿಸಿ ಹಾಲಹಳ್ಳಿ ಬ್ಯಾರೇಜ್ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂದ ೦.೯೫ ಟಿ.ಎಂ.ಸಿ ನೀರನೆತ್ತಿ ೩೦ ಸಣ್ಣ ಕೆರೆಗಳು ಮತ್ತು ೬ ಇಂಗು ಕೆರೆಗಳು ಸೇರಿ ೩೬ ಕೆರೆಗಳು ತುಂಬಿಸುವ ಯೋಜನೆಯ ಕುರಿತು ಮಾಹಿತಿ ಪಡೆದು ಮಾತನಾಡಿದ ಅವರು, ಔರಾದ್ ಕ್ಷೇತ್ರದಲ್ಲಿ ಪ್ರತಿ ವರ್ಷ ಎದುರಾಗುವ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಪಡಿಸಬೇಕು ಮತ್ತು ರೈತರಿಗೆ ಅನುಕೂಲ ಕಲ್ಪಿಸಬೇಕೆಂಬ ಉದ್ದೇಶದಿಂದ ಸಾಕಷ್ಟು ಪ್ರಯತ್ನಪಟ್ಟು ಸಿಎಂ ಮತ್ತು ಸಚಿವರ ಮೇಲೆ ಒತ್ತಡ ಹೇರಿ ೫೬೦ ಕೋಟಿ ರೂ. ಬೃಹತ್ ಮೊತ್ತದ ಯೋಜನೆಯನ್ನು ತಂದಿದ್ದೇನೆ. ಕ್ಷೇತ್ರದ ಇತಿಹಾಸದಲ್ಲಿಯೇ ಇದು ದೊಡ್ಡ ಯೋಜನೆಯಾಗಿದ್ದು, ಕೆಲ ದಿನಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಹೇಳಿದರು.

ಎಲ್ಲರಿಗೆ ಅನ್ನ ನೀಡಿ ಪೋಷಿಸುವ ರೈತರ ಕೈ ಬಲಪಡಿಸಬೇಕು. ಅವರು ಆರ್ಥಿಕವಾಗಿ ಸದೃಢರಾಗಲು ಈ ಯೋಜನೆ ಮಹತ್ವದ ಪಾತ್ರ ವಹಿಸಲಿದೆ. ಅಧಿಕಾರಿಗಳು ಕೇವಲ ಕಚೇರಿಗೆ ಸೀಮಿತವಾಗದೆ ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶವನ್ನು ಅರಿಯಬೇಕು. ನಾನು ಜಾಕ್ವೇಲ್, ಪಂಪ್‌ಹೌಸ್, ಪವರ್ ಸಬ್ ಸ್ಟೇಷನ್ ನಿರ್ಮಿಸುವ ಸ್ಥಳಕ್ಕೆ ಭೇಟಿ ನೀಡಿದ್ದು, ಮುಂದಿನ ದಿನಗಳಲ್ಲಿ ಕಾಮಗಾರಿ ನಡೆಯುವ ಎಲ್ಲ ಕಡೆಗಳಿಗೆ ಭೇಟಿ ನೀಡಲಿದ್ದೇನೆ ಎಂದರು.

ಯೋಜನೆಯ ಯಶಸ್ವಿಗೆ ರೈತರು, ಸ್ಥಳೀಯರು ನೀಡುವ ಸಲಹೆ ಸೂಚನೆಗಳನ್ನು ಪರಿಗಣಿಸಬೇಕು. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಕೆಎನ್‌ಎನ್‌ಎಲ್ ಭಾಲ್ಕಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಜ್ಞಾನೇಶ್ವರ ಮಂಡೆ, ಎಇಇ ಸಂಜುಕುಮಾರ ಹಳ್ಳೆ, ಇಲಾಖೆಯ ಮಾರುತೆಪ್ಪ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಕಿರಣ ಪಾಟೀಲ್, ಶಿವಕುಮಾರ ವಡ್ಡೆ, ಬಸವರಾಜ ಪಾಟೀಲ್, ಪ್ರವೀಣ ಕಾರಬಾರಿ, ಶಿವರಾಜ ಅಲ್ಮಾಜೆ, ಅಶೋಕ ಮೇತ್ರೆ, ಗಿರೀಶ್ ವಡೆಯರ್, ಸುಭಾಷ ಲಕ್ಷ್ಮೀನಗರ, ಯೋಗೇಶ ಬಿರಾದಾರ್, ಸಂದೀಪ್ ಪಾಟೀಲ್, ಅನೀಲ ಹೊಳಸಮುದ್ರೆ, ಭರತ ಕದಂ ಇತರರಿದ್ದರು.

ಔರಾದ್ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ಎಲ್ಲ ಕೆರೆಗಳು ಬತ್ತಿ ಹೋಗಿ ನೀರಿನ ಆಭಾವ ಉಂಟಾಗಿ ಜನ, ಜಾನುವಾರುಗಳು, ಪಶು, ಪಕ್ಷಿಗಳಿಗೂ ನೀರು ಸಿಗುವುದು ಕಷ್ಟವಾಗುತ್ತದೆ. ಎಲ್ಲ ಕಾಲದಲ್ಲಿಯೂ ನೀರು ಲಭ್ಯವಿರಬೇಕೆಂಬ ಸದಾಶಯದಂದಿಗೆ ಬಹುದೊಡ್ಡ ಯೋಜನೆಯನ್ನು ತಂದಿದ್ದು, ಕಾಮಗಾರಿ ಯೋಜನಾಬದ್ಧವಾಗಿ ನಡೆಯಬೇಕು.

| ಪ್ರಭು ಚವ್ಹಾಣ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net