

ಪವಿತ್ರಾ ಕುಂದಾಪುರ ಬೆಂಗಳೂರು
ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ರಸ್ತೆ ಉಬ್ಬುಗಳ ಮೇಲೂ ಕೆಎಸ್ಸಾರ್ಟಿಸಿ ಬಸ್ ಹಾರಿಸಿದ ಚಾಲಕನ ಎಡವಟ್ಟಿನಿಂದ ಮೊಣಕೈ ಮುರಿತಕ್ಕೊಳಗಾಗಿದ್ದ ಶಿಕ್ಷಕಿಯ ನೆರವಿಗೆ ಧಾವಿಸಿರುವ ಹೈಕೋರ್ಟ್, 6.60 ಲಕ್ಷ ರೂ. ಪರಿಹಾರ ಕೊಡಲು ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣ ಹೊರಡಿಸಿದ್ದ ಆದೇಶವನ್ನು ಪುರಸ್ಕರಿಸಿದೆ. ಬಸ್ನ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಶಿಕ್ಷಕಿ, ಪದೇಪದೆ ಕಿಟಕಿಯಿಂದ ಕೈ ಹೊರಹಾಕುತ್ತಿದ್ದರಿಂದ ಎದುರಿನ ಮತ್ತೊಂದು ವಾಹನಕ್ಕೆ ತಾಗಿ ಅನಾಹುತ ಸಂಭವಿಸಿದೆ ಎಂಬ ಕೆಎಸ್ಸಾರ್ಟಿಸಿಯ ಸುಳ್ಳಿನ ವಾದವನ್ನು ನ್ಯಾಯಪೀಠ ಸಾರಾಸಗಟಾಗಿ ತಳ್ಳಿಹಾಕಿದೆ.
2016ರ ಅ. 30ರಂದು ಸಂಭವಿಸಿದ್ದ ಅಪಘಾತದಲ್ಲಿ ಮಂಗಳೂರಿನ ಸೋಮೇಶ್ವರ ಮೂಲದ ಬಿ. ಶ್ಯಾಮಲಾ ಎಂಬುವರಿಗೆ ಮೊಣಕೈ ಗಾಯವಾಗಿತ್ತು. ವಿಚಾರಣೆ ನಡೆಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮೋಟಾರು ವಾಹನಗಳ ಅಪಘಾತ ಪರಿಹಾರ ನ್ಯಾಯಾಧಿಕರಣ 6,60,100 ರೂ. ಪರಿಹಾರ ಕೊಡಲು 2022 ರ ಅ. 29ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆಎಸ್ಸಾರ್ಟಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲ್ಲಕೂರು ಸುಮಲತಾ ಅವರ ಏಕಸದಸ್ಯ ಪೀಠ, ನ್ಯಾಯಾಧಿಕರಣದ ಆದೇಶವನ್ನು ಎತ್ತಿಹಿಡಿದಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಶಿಕ್ಷಕಿ ಮಾಸಿಕ 59,149 ರೂ. ವೇತನ ಪಡೆಯುತ್ತಿದ್ದಾರೆ. ಅವರು ನೀಡಿರುವ ದಾಖಲೆಗಳಿಂದ ವೃತ್ತಿ ಮತ್ತು ಆದಾಯ ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ನ್ಯಾಯಮಂಡಳಿಯೂ ಅವರ ಕಾಲ್ಪನಿಕ ಆದಾಯವನ್ನು 9,500 ರೂ. ಎಂದು ಪರಿಗಣಿಸಿ, ‘ಅಂಗವೈಕಲ್ಯದಿಂದಾಗಿ ಭವಿಷ್ಯದ ಆದಾಯದ ನಷ್ಟ’ ಮತ್ತು ‘ಗಾಯಗೊಂಡ ಅವಧಿಯಲ್ಲಿ ಆದಂತಹ ಗಳಿಕೆಯ ನಷ್ಟ’ ಲೆಕ್ಕಾಚಾರದೊಂದಿಗೆ ಪರಿಹಾರಕ್ಕೆ ಆದೇಶಿಸಿರುವುದು ಸಮಂಜಸವಾಗಿದೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಕಿಟಕಿಯಿಂದ ಕೈ ಹೊರಹಾಕಿದ್ದರಿಂದ ಶಿಕ್ಷಕಿಯ ಮೊಣಕೈಗೆ ಇನ್ನೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಅನಾಹುತ ಸಂಭವಿಸಿದೆ ಎಂದು ಕೆಎಸ್ಆರ್ಟಿಸಿ ಹೇಳುತ್ತದೆ. ಆದರೆ, ಈ ವಿಚಾರವಾಗಿ ಯಾವುದೇ ಪೂರಕ ದಾಖಲೆ ಒದಗಿಸಿಲ್ಲ. ಒಂದೇ ಮಾರ್ಗದಲ್ಲಿ ಚಲಿಸುವಾಗ ಎರಡು ವಾಹನಗಳು ಪರಸ್ಪರ ಹತ್ತಿರ ಬರುತ್ತಿದ್ದರೆ ಅದರಲ್ಲಿ ಒಂದು ವಾಹನದ ತಪ್ಪಾಗಿರುತ್ತದೆ. ಈ ಬಗ್ಗೆ ಚಾಲಕ ಅಥವಾ ನಿರ್ವಾಹಕ ತಕ್ಷಣವೇ, ಇಲ್ಲವೇ ನಂತರವಾದರೂ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಕ್ಕೆ ದೂರು ನೀಡಬೇಕು. ಆದರೆ, ಯಾವ ಅಧಿಕಾರಿಯೂ ಈ ಬಗ್ಗೆ ದೂರು ನೀಡಿಲ್ಲ. ಹೀಗಿರುವಾಗ ಅವರ ವಾದ ಒಪ್ಪಲಾಗದು. ಶಿಕ್ಷಕಿ ಒದಗಿಸಿರುವ ಎಲ್ಲ ದಾಖಲಾತಿಗಳಿಂದ ಬಸ್ ಚಾಲಕನ ನಿರ್ಲಕ್ಷ್ಯ ಸಾಬೀತಾಗಿದೆ ಎಂದಿರುವ ನ್ಯಾಯಪೀಠ ಮೇಲ್ಮನವಿ ವಜಾಗೊಳಿಸಿದೆ.
ಕೆಎಸ್ಸಾರ್ಟಿಸಿ ವಾದವೇನು?
ಪ್ರಕರಣದಲ್ಲಿ ಸಂತ್ರಸ್ತೆ ಎನ್ನಲಾದ ಶಿಕ್ಷಕಿ ಪ್ರಯಾಣದ ಉದ್ದಕ್ಕೂ ಕಿಟಕಿ ತರೆಯುವ ಮೂಲಕ ತಮ್ಮ ಮೊಣಕೈ ಹೊರಹಾಕುತ್ತಿದ್ದರು. ಇದರಿಂದ ಮೊಣಕೈ ಭಾಗವು ಎದುರು ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಗಾಯಗಳಾಗಿವೆ. ಇದೆಲ್ಲವನ್ನೂ ಮುಚ್ಚಿಟ್ಟು ಅವರು ಮನ ಬಂದಂತೆ ಸುಳ್ಳಿನ ಕಥೆ ಹೆಣೆದಿದ್ದಾರೆ. ಇದನ್ನು ಪೀಠ ಗಂಭೀರವಾಗಿ ಪರಿಗಣಿಸಬೇಕು ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಅಲ್ಲದೆ ಚಾಲಕನ ಪರವಾಗಿ ಶಿಕ್ಷಾರ್ಹ ಅಪರಾಧಗಳಿಗಾಗಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಸಕ್ಷಮ ನ್ಯಾಯಾಲಯ ಖುಲಾಸೆಗೊಳಿಸಿದೆ ಎಂದು ಪೀಠದ ಗಮನಕ್ಕೆ ತಂದಿದ್ದರು.
ಸಂತ್ರಸ್ತೆ ಹೇಳಿದ್ದೇನು?
ಚಾಲಕನ ನಿರ್ಲಕ್ಷ್ಯ ಹಾಗೂ ಅತಿವೇಗದ ಚಾಲನೆಯಿಂದಲೇ ಈ ಅವಘಡ ಸಂಭವಿಸಿದೆ ಎನ್ನುವುದು ಸಾಕ್ಷಾೃಧಾರಗಳಿಂದ ಸಾಬೀತಾಗಿದೆ. ಈ ನಿಟ್ಟಿನಲ್ಲಿ ನ್ಯಾಯಮಂಡಳಿ ಮೇಲ್ಮನವಿದಾರರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ ಎಂದು ಸಂತ್ರಸ್ತೆ ಪರ ವಕೀಲರು ತಿಳಿಸಿದರು.