

ಬೆಳಗಾವಿ: ನಗರದ ಪ್ರತಿಷ್ಠಿತ ಕೆಎಲ್ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ಎನ್.ಸಿ.ಸಿ. ವಾಯುದಳದ ಇಬ್ಬರು ಕೆಡೆಟ್ಸ್ಗಳು ಹಾಗೂ ಭೂದಳದ ಓರ್ವ ಕೆಡೆಟ್ ಪ್ರತಿಷ್ಠಿತ ಗಣರಾಜ್ಯೋತ್ಸವ-2023ರ ಶಿಬಿರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಮಹಾವಿದ್ಯಾಲಯದ ಎನ್.ಸಿ.ಸಿ. ವಿಭಾಗವು ರಾಜ್ಯ ಮಟ್ಟದ ಪ್ರತಿಷ್ಠಿತ ಪ್ರಶಸ್ತಿಗಳ ಗೌರವಕ್ಕೆ ಭಾಜನವಾಗಿದೆ. ಎನ್ಸಿಸಿ ಕೆಡೆಟ್ಸ್ಗಳು ಅದ್ವೀತಿಯ ಸಾಧನೆ ಮಾಡಿ ಗೌರವಕ್ಕೆ ಪಾತ್ರರಾಗಿದ್ದಾರೆ. ಗಣರಾಜ್ಯೋತ್ಸವ ಶಿಬಿರದಲ್ಲಿ ಅಖಿಲ ಭಾರತದ 17ಎನ್ಸಿಸಿ ನಿರ್ದೇಶನಾಲಯಗಳ ಒಟ್ಟು 2000 ಅಧಿಕ ಕೆಡೆಟ್ಸ್ಗಳಲ್ಲಿ 148 ಕೆಡೆಟ್ಸ್ಗಳು 26 ಜನೇವರಿ 2023 ರಂದು ರಾಷ್ಟ್ರಪತಿಗಳ ಸಮ್ಮುಖದಲ್ಲಿ ನಡೆದ ಗಣರಾಜ್ಯೋತ್ಸವ ಪರೇಡನಲ್ಲಿ ಭಾಗವಹಿಸಿದ್ದರು.
ಈ ಪೈಕಿ ಕಾಲೇಜಿನ ಕೆಡೆಟ್ ಗೌರಂಗ ಕಲಾಲ ಕೂಡ ಒಬ್ಬನಾಗಿದ್ದಾನೆ. 28 ಜನೇವರಿ 2023 ರಂದು ಜರುಗಿದ ಪ್ರಧಾನಮಂತ್ರಿಗಳ ಪಥ ಸಂಚಲನದಲ್ಲಿ ವಿವಿಧ ರಾಜ್ಯಗಳ ಎನ್ಸಿಸಿ ನಿರ್ದೇಶನಾಲಯಗಳ 300 ಕೆಡೆಟ್ಸ್ಗಳು ಭಾಗವಹಿಸಿದ್ದರು. ಈ ಪೈಕಿ ಆರ್ಎಲ್ಎಸ್ ಕಾಲೇಜಿನ ಕೆಡೆಟ್ಸ್ ಸಿದ್ದೇಶ ಠಾಕೂರ ಮತ್ತು ಸಂಕೇತ ಕಮತೆ ಆಯ್ಕೆ ಆಗಿ ಪ್ರಧಾನಮಂತ್ರಿಗಳ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳ ಎನ್ಸಿಸಿ ಸಾಧನೆಗೆ ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು, ಆಡಳಿತ ಮಂಡಳಿಯ ಸರ್ವಸದಸ್ಯರು, ಸ್ಥಾನಿಕ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರು ಹಾಗೂ ಸದಸ್ಯರು, ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೆ.ಎಸ್.ಕವಳೇಕರ, ಡಾ.ಸತೀಶ ಎಮ್.ಪಿ., ಪ್ರೊ.ಎಸ್.ಜಿ. ನಂಜಪ್ಪನವರ, ಮತ್ತು ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಪ್ರೊ. ವ್ಹಿ.ಸಿ. ಕಾಮಗೋಳ, ಉಪ-ಪ್ರಾಚಾರ್ಯ ಡಾ.ಎಸ್.ಎ. ಜವಳಿ, ಎನ್.ಸಿ.ಸಿ. ಅಧಿಕಾರಿ ನಟರಾಜ ಪಾಟೀಲ, ಡಾ.ಶಿವಾನಂದ ಬುಲಬುಲಿ ಹಾಗೂ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.