ಕೆಆರ್‌ಎಸ್ ಹಿನ್ನೀರಿನಲ್ಲಿ 144 ಜಾರಿಗೆ ತಯಾರಿ: ಮೋಜು-ಮಸ್ತಿಗಾಗಿ ಬರುವ ಜನರ ಸಾವು ತಡೆಯಲು ಕ್ರಮ

mysore
Published on

ಮೈಸೂರು: ಮೈಸೂರು ತಾಲೂಕಿನ ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ಮೋಜು-ಮಸ್ತಿಯಿಂದಾಗಿ ಜೀವ ಕಳೆದುಕೊಳ್ಳುವ ಪ್ರಕರಣಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತ ಕ್ರಮ ವಹಿಸಿದ್ದು, ಈ ಪ್ರದೇಶದಲ್ಲಿ ಸೆಕ್ಷನ್ 144 ಜಾರಿಗೊಳಿಸಲು ತಯಾರಿ ಮಾಡಿಕೊಳ್ಳಲಾಗಿದೆ.

ಪ್ರವಾಸಕ್ಕೆಂದು ಬಂದಿದ್ದ ಮೂವರು ಮಂಡ್ಯದ ಮಿಮ್ಸ್ ನರ್ಸಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ಭಾನುವಾರ ಇಲ್ಲಿನ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು.

ಘಟನಾ ಸ್ಥಳಕ್ಕೆ ಸೋಮವಾರ ಮಧ್ಯಾಹ್ನ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಜಿಪಂ ಸಿಇಒ ಯುಕೇಶ್ ಕುಮಾರ್, ತಹಸೀಲ್ದಾರ್ ಮಹೇಶ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಇಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಬಗ್ಗೆ ಸ್ಥಳೀಯರಿಂದ ಮಾಹಿತಿ ಕಲೆಹಾಕಿದರು.

ಈ ಸಂದರ್ಭದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಸಾವಿನ ಪ್ರಕರಣದ ವರದಿ ನೀಡುವಂತೆ ಸ್ಥಳದಲ್ಲೇ ಇದ್ದ ಇಲವಾಲ ಠಾಣೆಯ ಸಬ್ ಇನ್ಸ್‌ಪೆಕ್ಟರ್‌ಗೆ ಸೂಚನೆ ನೀಡಲಾಯಿತು. ಆ ವರದಿ ಸಲ್ಲಿಕೆಯಾದ ಬಳಿಕ ಸೆಕ್ಷನ್ 144 ಜಾರಿಗೊಳಿಸುವ ಸಂಬಂಧ ತಹಸೀಲ್ದಾರ್ ಮಹೇಶ್ ಕುಮಾರ್ ಅವರು ಮತ್ತೊಂದು ವರದಿ ನೀಡಲಿದ್ದಾರೆ. ನಂತರವಷ್ಟೇ ಈ ಪ್ರದೇಶದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.

ಇಲ್ಲಿಯ ಹಿನ್ನೀರಿನ ಪ್ರದೇಶದಲ್ಲಿ ನಿತ್ಯ ನೂರಾರು ಪ್ರವಾಸಿಗರು ಬರುತ್ತಾರೆ. ವಾರಾಂತ್ಯದ ದಿನ, ರಜೆ ದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಮೀನಾಕ್ಷಿಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ಅಂಗಡಿ, ಹೋಟೆಲ್‌ಗಳಲ್ಲಿ ಭರ್ಜರಿ ವ್ಯಾಪಾರವಾಗುತ್ತದೆ.

ಆದರೆ ಕುಡಿದ ನಶೆಯಲ್ಲಿ ಹಿನ್ನೀರಿನ ಪ್ರದೇಶದಲ್ಲಿ ಪುಂಡಾಟ ಮೆರೆಯುತ್ತಿದ್ದ ಕೆಲವು ಪ್ರವಾಸಿಗರು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಇಲ್ಲಿಯ ಚಟುವಟಿಕೆಗಳಿಂದ ಸ್ಥಳೀಯರಿಗೂ ಸಮಸ್ಯೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಇಲವಾಲ ಪೊಲೀಸರು ಕಾರ್ಯಾಚರಣೆ ನಡೆಸಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಹಿನ್ನೀರಿನ ಪ್ರದೇಶದಲ್ಲಿ ಮದ್ಯ ಸೇವಿಸುತ್ತಿದ್ದ ನಾಲ್ವರ ವಿರುದ್ಧ  ಪ್ರಕರಣ ದಾಖಲಿಸಿದ್ದರು. ನಂತರ ಗ್ರಾಮಸ್ಥರು ಹಾಗೂ ಇಲವಾಲ ಪೊಲೀಸರು ಹಿನ್ನೀರಿನ ಪ್ರದೇಶದ ಬಳಿ ನಾಲ್ಕು ಚಕ್ರದ ವಾಹನಗಳು ತೆರಳದಂತೆ ರಸ್ತೆಗೆ ಮರ ಹಾಗೂ ಕಬ್ಬಿಣದ ತುಂಡನ್ನು ಅಡ್ಡಲಾಗಿ ಇಟ್ಟು ವಾಹನ ಪ್ರವೇಶ ನಿರ್ಬಂಧಿಸಲಾಗಿತ್ತು.

ಹಂತ ಹಂತವಾಗಿ ಮೀನಾಕ್ಷಿಪುರದ ಹಿನ್ನೀರಿನ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಆದರೆ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳ ಜಲಸಮಾಧಿ ಪ್ರಕರಣದಿಂದ ಜಿಲ್ಲಾಡಳಿತ ಎಚ್ಚೆತ್ತುಕೊಂಡು ತ್ವರಿತವಾಗಿ ಕ್ರಮಕ್ಕೆ ಮುಂದಾಗಿದೆ. ಇದಕ್ಕೆ ಗ್ರಾಮಸ್ಥರು ಒಪ್ಪಿಗೆ ಸೂಚಿಸಿದ್ದಾರೆ.

ಪ್ರವಾಸಿಗರ ಆಗಮನದಿಂದ ನಮಗೆ ಲಾಭವೂ ಇಲ್ಲ, ನಿಷೇಧ ಮಾಡುವುದರಿಂದ ನಷ್ಟವೂ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಸಾಂತ್ಯದ ವೇಳೆಗೆ ಮೀನಾಕ್ಷಿಪುರದ ಹಿನ್ನೀರಿನ ಪ್ರದೇಶದಲ್ಲಿ ಸೆಕ್ಷನ್-144 ಜಾರಿಯಾಗುವ ನಿರೀಕ್ಷೆ ಇದೆ. ಅನೇಕ ಸುರಕ್ಷತಾ ಕ್ರಮಗಳು

ಮೀನಾಕ್ಷಿಪುರದಲ್ಲಿ ಪ್ರವಾಸಿಗರು ಸುರಕ್ಷತೆಯ ದೃಷ್ಟಿಯಿಂದ ಅನೇಕ ಸುರಕ್ಷಾ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

ಮೃತದೇಹ ಹಸ್ತಾಂತರ: ಭಾನುವಾರ ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ನೀರಲ್ಲಿ ಮುಳುಗಿ ಮೃತಪಟ್ಟ ನರ್ಸಿಂಗ್ ವಿದ್ಯಾರ್ಥಿಗಳಾದ ಪಿರಿಯಾಪಟ್ಟಣ ಪ್ರಶಾಂತ್, ಸಂತೆಮರಳ್ಳಿಯ ಸಿದ್ದೇಶ, ಕೊಪ್ಪಳದ ಕೃಷ್ಣ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಪಾಲಕರಿಗೆ ಹಸ್ತಾಂತರಿಸಲಾಯಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net