ಕೃಷಿ ಯೋಜನೆಗಳ ಪ್ರಚಾರ: ಆಕಾಶವಾಣಿ ಪಾತ್ರ ಪ್ರಮುಖ

ಕೃಷಿ ಯೋಜನೆಗಳ ಪ್ರಚಾರ: ಆಕಾಶವಾಣಿ ಪಾತ್ರ ಪ್ರಮುಖ
Published on

ಹಾಸನ: ಕೃಷಿ ಯೋಜನೆ ಮತ್ತು ಕಾರ್ಯಕ್ರಮಗಳನ್ನು ರೈತರಿಗೆ ತಲುಪಿಸುವಲ್ಲಿ ಆಕಾಶವಾಣಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕಿ ಡಾ. ಕೆ.ಸಿ. ಸುಷ್ಮಾ ಹೇಳಿದರು.


ಹಾಸನ ಆಕಾಶವಾಣಿ ಕೇಂದ್ರದ ಆವರಣದಲ್ಲಿ ಬುಧವಾರ 2023ನೇ ಸಾಲಿನ ರೇಡಿಯೋ ಕಿಸಾನ್ ದಿವಸದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕೃಷಿಕರ ಅಗತ್ಯಕ್ಕೆ ಅನುಗುಣವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ರೂಪಿಸಿವೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಪ್ರತಿ ಮೂರು ತಿಂಗಳಿಗೊಮ್ಮೆ ಕೋಟ್ಯಂತರ ರೈತರಿಗೆ ತಲಾ ಎರಡು ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲಾಗುತ್ತಿದೆ. ಜಿಲ್ಲೆಯ ಎರಡೂವರೆ ಲಕ್ಷ ರೈತರು ಇದರ ಫಲಾನುಭವಿಗಳಾಗಿದ್ದಾರೆ. ಇಂತಹ ಅನೇಕ ಉಪಯುಕ್ತ ಯೋಜನೆಗಳನ್ನು ರೈತರಿಗೆ ತಲುಪಿಸುವಲ್ಲಿ ಇಲಾಖೆಗೆ ಆಕಾಶವಾಣಿ ಅಪಾರ ನೆರವಾಗಿದೆ ಎಂದು ಶ್ಲಾಘಿಸಿದರು.


‘ರೈತರ ಮಾಹಿತಿ ಸಬಲೀಕರಣದಲ್ಲಿ ಕಿಸಾನ್‌ವಾಣಿ’ ಪಾತ್ರ ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಹಾಸನ ಆಕಾಶವಾಣಿ ಮುಖ್ಯಸ್ಥ ಎಂ. ಶಿವಕುಮಾರ್ ಅವರು, ಕೃಷಿಕರ ಅಗತ್ಯಗಳಿಗೆ ಅನುಗುಣವಾಗಿ ಹಾಸನ ಆಕಾಶವಾಣಿಯ ಕೃಷಿರಂಗ ವಿಭಾಗ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಿ ಪ್ರಸಾರ ಮಾಡಲಾಗುತ್ತಿದೆ. ಬದಲಾಗಿರುವ ತಂತ್ರಜ್ಞಾನ, ವಾತಾವರಣ ಹಾಗೂ ಕೃಷಿಕರ ಮನೋಭಾವವನ್ನು ಅರಿತು ಅದಕ್ಕೆ ಪೂರಕವಾಗಿ ವೈವಿಧ್ಯಮಯವಾದ ಕೃಷಿ ಕಾರ್ಯಕ್ರಮಗಳನ್ನು ಜಿಲ್ಲೆಯ ಕೃಷಿಕರಿಗೆ ಹಾಗೂ ಕೇಳುಗರಿಗೆ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.


ಹಾಸನ ಆಕಾಶವಾಣಿಯ ಕೃಷಿ ಕಾರ್ಯಕ್ರಮಗಳು ಇತ್ತೀಚೆಗೆ ಗೋವಾದ ಕೇಂದ್ರೀಯ ಕರಾವಳಿ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಬಾನುಲಿ ಕೃಷಿ ಕಾರ್ಯಕ್ರಮಗಳ ಕಾರ್ಯಾಗಾರದಲ್ಲಿಯೂ ಮೆಚ್ಚುಗೆಗೆ ಪಾತ್ರವಾಗಿದೆ. ಅರಕಲಗೂಡು ವಿ. ಮಧುಸೂದನ್ ಉಸ್ತುವಾರಿಯಲ್ಲಿ ಉತ್ತಮ ಕೃಷಿ ಕಾರ್ಯಕ್ರಮಗಳು ಮೂಡಿಬರುತ್ತಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಆಕಾಶವಾಣಿಯ ಕೃಷಿ ಕಾರ್ಯಕ್ರಮಗಳಿಂದ ರೈತರಿಗೆ ದೊರೆಯುತ್ತಿರುವ ಅನುಕೂಲಗಳ ಕುರಿತು ಚನ್ನರಾಯಪಟ್ಟಣ ತಾಲೂಕು ಸಂತೆಶಿವರ ಗ್ರಾಮದ ಪ್ರಗತಿಪರ ಕೃಷಿಕ ಬಸವರಾಜು ಮಾತಾನಾಡಿ, ಆಕಾಶವಾಣಿಯ ಹಲವು ಕಾರ್ಯಕ್ರಮಗಳು ತಮ್ಮನ್ನು ಪ್ರಗತಿಪರ ರೈತನನ್ನಾಗಿ ಮಾರ್ಪಾಡು ಮಾಡಿವೆ ಎಂದು ಹೇಳಿದರು.


ಕಂದಲಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜೇಗೌಡ ಮಾತನಾಡಿ, ವಿವಿಧ ತಂತ್ರಜ್ಞಾನ ಹಾಗೂ ನೂತನ ಆವಿಷ್ಕಾರಗಳನ್ನು ಕೃಷಿಕರಿಗೆ ತಲುಪಿಸುವಲ್ಲಿ ಆಕಾಶವಾಣಿ ಪ್ರಮುಖ ಪಾತ್ರವಹಿಸುತ್ತಿದೆ. ಸುಧಾರಿತ ತಳಿಗಳು ಹಾಗೂ ಸುಧಾರಿತ ಯಂತ್ರಗಳ ಕುರಿತು ಆಕಾಶವಾಣಿಯಲ್ಲಿ ಪ್ರಸಾರವಾದ ಕಾರ್ಯಕ್ರಮಗಳಿಂದಾಗಿ ಅವುಗಳಿಗೆ ವ್ಯಾಪಕ ಬೇಡಿಕೆ ಬಂದಿದೆ. ಈ ಮೂಲಕ ಕೃಷಿ ಉತ್ಪನ್ನದ ಪ್ರಮಾಣವೂ ಹೆಚ್ಚಳಗೊಂಡಿದ್ದು, ರೈತರ ಆಧಾಯ ವೃದ್ಧಿಗೆ ಪೂರಕವಾಗಿದೆ ಎಂದರು.


ಹಾಸನ ತಾಲೂಕು ಬ್ಯಾಡರಹಳ್ಳಿಯ ಪ್ರಗತಿಪರ ಕೃಷಿಕ ರವಿಶಂಕರ್, ಸಕಲೇಶಪುರದ ಏಲಕ್ಕಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಕೆ.ಎನ್. ಹರ್ಷ, ದಾವಣಗೆರೆ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ಶಿವಕುಮಾರ ಕಣಸೋಗಿ, ಹಿರಿಯ ಪತ್ರಕರ್ತ ಗಾಣದಾಳು ಶ್ರೀಕಂಠ ಅವರು ವಿವಿಧ ವಿಚಾರಗಳ ಕುರಿತು ವಿಷಯ ಮಂಡಿಸಿದರು.


ಕೃಷಿಗೆ ಸಂಬಂಧಿಸಿದಂತೆ ವಿವಿಧ ಸಾಧನೆಗೈದು ರಾಜ್ಯ ಹಾಗು ಜಿಲ್ಲಾ ಮಟ್ಟದ ವಿವಿಧ ಪ್ರಶಸ್ತಿಗೆ ಭಾಜನರಾಗಿರುವ ಹೊಳೇನರಸೀಪುರ ತಾಲೂಕು ಬಂಟರತಳಾಳು ರೈತ ಮಹಿಳೆ ಎಂ. ಕವಿತಾ, ಚನ್ನರಾಯಟ್ಟಣ ತಾಲೂಕು ಬಳದರೆಯ ಯುವ ಕೃಷಿಕ ಮಂಜೇಗೌಡ, ಆಲೂರು ತಾಲೂಕು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಹಲಗೇಗೌಡ, ಅರಸೀಕೆರೆ ತಾಲೂಕು ಗಂಡಸಿಯ ಗಂಗಯ್ಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು.


ಆಕಾಶವಾಣಿಯ ಅಂಗಳದಲ್ಲಿ ಏರ್ಪಡಿಸಿದ್ದ ಸಾವಯವ ರೈತ ಸಂತೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳ ಸಾವಯವ ಕೃಷಿಕರು ಹಾಗೂ ಆಕಾಶವಾಣಿಯ ಕೇಳುಗರು ಭಾಗವಹಿಸಿದ್ದರು. ಹಾಸನ ಆಕಾಶವಾಣಿ ಕೇಂದ್ರದ ಕೃಷಿ ಕಾರ್ಯಕ್ರಮ ವಿಭಾಗದ ಅರಕಲಗೂಡು ವಿ. ಮಧುಸೂದನ್, ತಾಂತ್ರಿಕ ವಿಭಾಗದ ರಘುರಾಮ್ ನಾಯಕ್, ಆಡಳಿತ ವಿಭಾಗದ ನಟರಾಜ್, ಆಕಾಶವಾಣಿಯ ಉದ್ಘೋಷಕರು ಮತ್ತು ಹಾಸನ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಎ.ವಿ. ರಶ್ಮಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆಕಾಶವಾಣಿ ಉದ್ಘೋಷಕಿ ಎ.ಎಂ. ಸ್ಪೂರ್ತಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net