

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದಲ್ಲಿ ಚರಂಡಿಗಳ ಮುಚ್ಚಳಗಳು ಒಡೆದು ಅನಾಹುತಕ್ಕೆ ಆಹ್ವಾನ ನೀಡುತ್ತಿವೆ.
ಕೆಲ ವರ್ಷಗಳ ಹಿಂದೆ ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದ ಬಹುತೇಕ ಬೀದಿಗಳಿಗೆ ಸಿಮೆಂಟ್ ರಸ್ತೆ ಹಾಗೂ ರಸ್ತೆಯ ನಡುವೆ ಚರಂಡಿಗಳನ್ನು ನಿರ್ಮಿಸಿ ಮೇಲ್ಭಾಗದಲ್ಲಿ ಸಿಮೆಂಟ್ ಹಲಗೆಗಳನ್ನು ಮುಚ್ಚಲಾಗಿತ್ತು. ಆದರೆ ವಾಹನಗಳ ಸಂಚಾರದಿಂದ ಕೆಲವು ರಸ್ತೆಗಳಲ್ಲಿ ಚರಂಡಿಯ ಮುಚ್ಚಳಗಳು ಹಾಳಾಗಿವೆ. ಇನ್ನೂ ಕೆಲವು ಕಡೆಗಳಲ್ಲಿ ಕುಸಿದು ಚರಂಡಿಯೊಳಗೆ ಬಿದ್ದಿವೆ. ಇದರಿಂದ ಈ ರಸ್ತೆಗಳಲ್ಲಿ ಜನ-ಜಾನುವಾರುಗಳು ಓಡಾಡಲು ಸಮಸ್ಯೆಯಾಗುತ್ತಿದೆ. ಇಕ್ಕಟ್ಟಾದ ರಸ್ತೆಗಳಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ರಾತ್ರಿ ವೇಳೆ ಬೀದಿಗಳಲ್ಲಿ ಓಡಾಡಲು ತೊಂದರೆಯಾಗುತ್ತಿದೆ.
ಅಲ್ಲದೆ ಹಲವಾರು ವರ್ಷಗಳಿಂದ ಚರಂಡಿ ಹೂಳೆತ್ತದ ಪರಿಣಾಮ ಕೊಳಚೆ ನೀರು ನಿಂತು ದುರ್ನಾತ ಬೀರುತ್ತಿದೆ. ಸೊಳ್ಳೆಗಳ ಕಾಟದಿಂದ ಅಕ್ಕಪಕ್ಕದ ಮನೆಯವರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಲಾಗಿದೆ. ಚರಂಡಿ ಹೂಳೆತ್ತಿಸಿ ಕುಸಿದಿರುವ ಮುಚ್ಚಳವನ್ನು ಬದಲಾಯಿಸಲಾಗುವುದು.
ಕೊಡಸೋಗೆ ಗ್ರಾಮಪಂಚಾಯಿತಿ ಪಿಡಿಒ ಸುನೀತಾ ತಿಳಿಸಿದ್ದಾರೆ.