

ಮೈಸೂರು: ರಾಜೀವ್ನಗರದ ಎಸ್.ಬೇಬಿ ಫಾತಿಮಾ ಅವರು ನವದೆಹಲಿಯಲ್ಲಿ ಇತ್ತೀಚೆಗೆ ನಡೆದ 4ನೇ ಇಂಡಿಯನ್ ಓಪನ್ ಇಂಟರ್ ನ್ಯಾಷನಲ್ ಕಿಕ್ ಬಾಕ್ಸಿಂಗ್ನಲ್ಲಿ ಎರಡು ಬೆಳ್ಳಿ ಪದಕ ಪಡೆದಿದ್ದಾರೆ. ಮುಂದಿನ ಸಾಧನೆಗೆ ಆರ್ಥಿಕ ನೆರವಿನ ಅಗತ್ಯ ಇದೆ.
ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಅಕ್ರಂ ಪಾಷಾ(ಶೋಭನಾ) ಅವರ ಸಾಕುಮಗಳು ಫಾತಿಮಾ, ಸಂಕಷ್ಟದ ನಡುವೆಯೂ ಇವರ ಪೋಷಣೆ, ಸಾಧನೆಗೆ ಸಹಕಾರ ನೀಡುತ್ತಿದ್ದಾರೆ.
ತರಬೇತಿ ಮತ್ತು ಇತರ ವೆಚ್ಚಕ್ಕಾಗಿ ಪ್ರತಿ ತಿಂಗಳು 10 ಸಾವಿರ ರೂ. ಖರ್ಚಾಗುತ್ತಿದ್ದು, ಸರ್ಕಾರ ಅಥವಾ ಇತರ ಸಂಘ ಸಂಸ್ಥೆಗಳು ಸಹಾಯ ಮಾಡಿದರೆ ಅನುಕೂಲವಾಗುತ್ತದೆ ಎಂದು ಸಮುದಾಯದ ಮುಖಂಡ ಪ್ರಣತಿ ಪ್ರಕಾಶ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಕ್ರಂ ಪಾಷಾ ಮಾತನಾಡಿ, ಮಗಳು ಜೆಎಸ್ಎಸ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದು, ಕ್ರೀಡೆ ಕುರಿತು ಆಸಕ್ತಿ ಹೊಂದಿದ್ದಾಳೆ. ಒಲಿಂಪಿಕ್ ಸ್ಪರ್ಧೆಯಲ್ಲಿ ಭಾಗವಹಿಸುವ ಗುರಿ ಹೊಂದಿದ್ದಾಳೆ. ಮೈಸೂರು ವಿಶ್ವವಿದ್ಯಾಲಯದ ಜಸ್ವಂತ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾಳೆ.
ಸಹಾಯ ಮಾಡಲು ಇಚ್ಚಿಸುವವರು ಮೊ.ಸಂ. 9740534739 ಸಂಪರ್ಕಿಸಬಹುದು ಎಂದು ಕೋರಿದ್ದಾರೆ. ಎಸ್.ಬೇಬಿ ಫಾತಿಮಾ ಇದ್ದರು.