ಕಾಂಗ್ರೆಸ್ ಸರ್ಕಾರದಿಂದ ಜೈಲು ಅಕ್ರಮಗಳಿಗೆ ಬ್ರೇಕ್

2222222
Published on

ವಿಜಯವಾಣಿ ಸುದ್ದಿಜಾಲ ಆನೇಕಲ್
ಕಾಂಗ್ರೆಸ್ ಸರ್ಕಾರ ಬಂದ ನಂತರ ಜೈಲುಗಳಲ್ಲಿನ ಅಕ್ರಮಕ್ಕೆ ಕಡಿವಾಣ ಹಾಕಲಾಗುತ್ತಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಬೊಮ್ಮಸಂದ್ರದಲ್ಲಿ ಕೆಐಎಡಿಬಿ ಕ್ವಾರ್ಟರ್ಸ್ ಆವರಣದಲ್ಲಿ ಔಟ್‌ಡೋರ್ ಜಿಮ್‌ಗೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಕ್ರಮಗಳನ್ನು ತಡೆಯಲು ವಿಫಲವಾಗಿದ್ದರು. ಆದರೆ, ಕೇವಲ ಮಾಧ್ಯಮಗಳ ಮುಂದೆ ಅವರು ಆರೋಪಗಳನ್ನು ಮಾಡಿಕೊಂಡು ಬರುತ್ತಿದ್ದಾರೆ. ನಮ್ಮ ಸರ್ಕಾರ ಯಾವುದೇ ರೀತಿಯ ಅಕ್ರಮ ಹಾಗೂ ಭ್ರಷ್ಟಾಚಾರ ನಡೆಯಲು ಬಿಡುತ್ತಿಲ್ಲ ಎಂದರು.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿರುವ ಕೆಐಎಡಿಬಿ ಕ್ವಾರ್ಟರ್ಸ್‌ ಆವರಣದಲ್ಲಿ ಬೊಮ್ಮಸಂದ್ರ ಇಂಡಸ್ಟ್ರೀಸ್ ಅಸೋಸಿಯೇಷನ್ ಮತ್ತು ಕೆಐಎಡಿಬಿ ರೆಸಿಡೆನ್ಶಿಯಲ್ಕ್ವಾಟ್ರರ್ಸ್ ವೆಲ್ಫೇರ್ ಅಸೋಸಿಯೇಷನ್ ಸಹಯೋಗದಲ್ಲಿ ಪಾರ್ಕ್ ಮತ್ತು ಔಟ್‌ಡೋರ್ ಜಿಮ್ ನಿರ್ಮಾಣ ಮಾಡಿದ್ದಾರೆ. ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಸ್ಥಳೀಯವಾಗಿ ಮಕ್ಕಳಿಗೆ ಇದು ಉಪಯೋಗಕ್ಕೆ ಬರಲಿದೆ ಎಂದು ಹೇಳಿದರು.
ಬೊಮ್ಮಸಂದ್ರ ಇಂಡಸ್ಟ್ರೀಸ್ ಅಸೋಸಿಯೇಷನ್ ಅಧ್ಯಕ್ಷರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ.ಪ್ರಸಾದ್ ಮಾತನಾಡಿ, ಸಂಘದ ವತಿಯಿಂದ ಪುರಸಭೆಯ ಪೌರಕಾರ್ಮಿಕರಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ಪ್ರತಿದಿನ ಮಧ್ಯಾಹ್ನದ ಬಿಸಿಊಟ ನೀಡುವ ಕಾರ್ಯಕ್ರಮ ಹತ್ತು ದಿನದಿಂದ ನಡೆಯುತ್ತಿದೆ. ಅದೇರೀತಿ ಪ್ರತಿದಿನ ಬೆಳಗ್ಗೆ ಹಾಗೂ ಸಂಜೆ ಸಮಯದಲ್ಲಿ ಜನ ವಾಕಿಂಗ್ ಮಾಡುತ್ತಾರೆ. ಅವರ ಜತೆ ಬರುವ ಮಕ್ಕಳು ಹಾಗೂ ಯುವಕರಿಗೆ ಸಹಾಯವಾಗಲು ಮೈದಾನದ ಪಕ್ಕದಲ್ಲಿ ತೆರೆದ ಜಿಮ್ ನಿರ್ಮಾಣ ಮಾಡಲಾಗಿದೆ ಎಂದು ಹೇಳಿದರು.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿನ ಅಭಿವೃದ್ಧಿ ಕೆಲಸಗಳಿಗೆ ಮೂಲ ಪ್ರೇರಣೆ ಸಚಿವ ರಾಮಲಿಂಗಾರೆಡ್ಡಿ. ಪ್ರತಿಬಾರಿ ನಮ್ಮ ಕಾರ್ಯಕ್ರಮಗಳಿಗೆ ಅವರು ಬೆಂಬಲ ನೀಡುತ್ತಾ ಬಂದಿದ್ದಾರೆ ಎಂದರು.
ಕೈಗಾರಿಕಾ ಸಂಘದ ಪದಾಧಿಕಾರಿಗಳಾದ ಸಂಜೀವ್ ಸಾವಂತ್, ಮುರಳಿ, ನರೇಂದ್ರ ಕುಮಾರ್, ಪಾಟೀಲ್, ನೀಲಕಂಠಯ್ಯ, ನಾಗರಾಜ್ ಶೆಟ್ಟಿ, ಅಶ್ವತ್ಥ್, ಶಿವಕುಮಾರ್, ಕೆಐಎಡಿಬಿ ರೆಸಿಡೆನ್ಶಿಯಲ್ ಕ್ವಾಟರ್ಸ್‌ ವೆಲ್ಫೇರ್ ಅಸೋಸಿಯೇಷನ್‌ನ ಅಧ್ಯಕ್ಷ ಉದಯ್ ಶೆಟ್ಟಿ, ವಿನೋದ್, ಗೋಪಾಲ್ ಸಿಂಗ್, ಹನುಮಂತ ರಾವ್, ಸ್ಥಳೀಯ ಮುಖಂಡರಾದ ಕಾಚನಾಯಕನಹಳ್ಳಿ ಕಿರಣ್ ಕುಮಾರ್, ಪುನೀತ್, ದಿಲೀಪ್, ಮುರುಗೇಶ್, ರಾಜಣ್ಣ, ರಾಜೇಶ್, ನವೀನ್ ಇದ್ದರು.

ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಸೇರಿ ಹಲವು ರೌಡಿಶೀಟರ್‌ಗಳನ್ನು ಬೇರೆ ಬೇರೆ ಕಡೆಗೆ ಸ್ಥಳಾಂತರ ಮಾಡಿದ್ದೇವೆ. ಅದೇ ರೀತಿ ಅಧಿಕಾರಿಗಳನ್ನು ಕೂಡ ವರ್ಗಾವಣೆ ಮಾಡಿದ್ದು, ಭ್ರಷ್ಟಾಚಾರ ತಡೆಯುವಲ್ಲಿ ಸರ್ಕಾರ ಕ್ರಮ ಕೈಗೊಂಡಿದೆ.ರಾಮಲಿಂಗಾರೆಡ್ಡಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net