

ಕಲಬುರಗಿ: ಭಾನುವಾರ ಮತ್ತೆ 39 ಮಂದಿಗೆ ಕರೊನಾ ಪಾಸಿಟಿವ್ ಬಂದಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1199 ಕ್ಕೇರಿದಂತಾಗಿದೆ. ಒಂಬತ್ತು ಜನ ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ. 13 ಸೋಂಕಿತರು ಐಸಿಯುದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಹೊಸದಾಗಿ ಪತ್ತೆಯಾಗಿರುವ ಪ್ರಕರಣಗಳಲ್ಲಿ ಒಂದು ವರ್ಷದ ಎರಡು ಗಂಡು ಮಕ್ಕಳು, ಮೂರು ವರ್ಷದ ಎರಡು ಗಂಡು ಮಕ್ಕಳು ಎರಡು ವರ್ಷದ ಒಂದು ಹೆಣ್ಣು ಮಗು ಸೇರಿದೆ. ಈ ಎಲ್ಲರೂ ಸೇರಿ ಒಟ್ಟು ಮಕ್ಕಳ ಸಂಖ್ಯೆ 11ಆಗಿದೆ. ಇನ್ನುಳಿದವರಲ್ಲಿ ಒಂಬತ್ತು ಮಹಿಳೆಯರಿಗೆ ಸೋಂಕು ತಗುಲಿದೆ.
ಒಟ್ಟು ಪ್ರಕರಣಗಳಲ್ಲಿ 30 ಜನ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ರಾಯಚೂರಿನಿಂದ ಬಂದವರಿಗೊಬ್ಬರಿಗೆ ಸೋಂಕು ತಗುಲಿದೆ. ಅಲ್ಲದೇ ತೆಲಂಗಾಣದಿಂದ ಬಂದ ಇಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇನ್ನು ಆರು ಜನರು ಇತರೆ ರೋಗಿಗಳ ಸಂಪರ್ಕದಿಂದ ಬಂದವರಾಗಿದ್ದಾರೆ. ಈ ಪೈಕಿ ಒಬ್ಬರು 7908 ಸಂಪರ್ಕ, ಒಬ್ಬರು 8697 ಸಂಪರ್ಕ, ಒಬ್ಬರು 8692 ಸಂಪರ್ಕ, ಒಬ್ಬರು ಪಿ-1243, 1244, 1245 ಸಂಪರ್ಕ, ಇನ್ನೊಬ್ಬರು ಪಿ-8270 ಸಂಪರ್ಕಕ್ಕೆ ಬಂದಿದ್ದಾರೆ. ಇವರೆಲ್ಲರನ್ನು ಈಗ ಇಲ್ಲಿಯ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಇವರ ಪ್ರದೇಶಗಳಲ್ಲಿ ಬರುವ ಕೆಲವು ಮನೆಗಳನ್ನು ಸೀಲ್ಡೌನ್ ಮಾಡಲಾಗಿದೆ. ಅವರ ಸಂಬಂಧಿಕರನ್ನು ಸಹ ಪರೀಕ್ಷೆಗೆ ಒಳಪಡಿಸಲಾಗಿದೆ.
ಇಂದಿನ ಪ್ರಕರಣಗಳು ಸೇರಿ ಒಟ್ಟು ಸಂಖ್ಯೆ 1199ಕ್ಕೇರಿದ್ದು, ಇವರಲ್ಲಿ ಹನ್ನೊಂದು ಜನ ಮೃತಪಟ್ಟಿದ್ದಾರೆ. ಇಂದು 9 ಜನ ಚೇತರಿಸಿಕೊಂಡಿದ್ದು, ಈವರೆಗೆ 697 ಜನ ಚೇತರಿಸಿಕೊಂಡು ಮನೆಗಳಿಗೆ ತೆರಳಿದ್ದಾರೆ. 491 ಸಕ್ರಿಯ ಪ್ರಕರಣಗಳಿವೆ. ಐಸಿಯು ವಾರ್ಡನಲ್ಲಿ 13 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.