

ಬಾಗಲಕೋಟೆ: ನವನಗರದ ಎಪಿಎಂಸಿ ಬಳಿ ಇರುವ ಬೌದ್ಧ ವಿಹಾರದಲ್ಲಿ ಹುಣ್ಣಿಮೆಯ ಪ್ರಯುಕ್ತ ಧಮ್ಮ ದೀಪೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಧಮ್ಮಪಾಲ ಬಂತೇಜಿ ಮಾತನಾಡಿ, ಪ್ರತಿ ಹುಣ್ಣಿಮೆಗೆ ಧಮ್ಮದೀಪೋತ್ಸವ ನಡೆಯಲಿದೆ. ಗೌತಮ ಬುದ್ಧನ ಅತ್ತ ದೀಪ ಭವ (ಸ್ವಯಂ ಪ್ರಕಾಶಿತರಾಗಿ) ಎಂಬ ಮೂಲ ತತ್ವದ ನೆಲೆಗಟ್ಟಿನಲ್ಲಿ ಬೌದ್ಧರಲ್ಲಿ `ಪದ್ದಿಪೋ ಉಸರ್ಗ ಎಂಬುದು ಸಾಮೂಹಿಕ ಬುದ್ದ ಪ್ರಾರ್ಥನೆಯ ಒಂದು ಕ್ರಮ. ಪ್ರಜ್ವಲಿಸುವ ದೀಪ ಎಂದು ಇದರ ಭಾವಾನುವಾದ. ಇದೊಂದು ವೈಚಾರಿಕ ಸಂಕಲ್ಪ. `ಧಮ್ಮಪದ ಅಡ್ಡಗಾಥಾ' ದಲ್ಲಿ ಇದರ ಉಲ್ಲೇಖವಿದೆ ಎಂದರು.
ಇAತಹ ಪರಿಕ್ರಮದಂತೆ ಸಾಮ್ರಾಟ ಅಶೋಕ ಚಕ್ರವರ್ತಿ ಪಾಟಲೀಪುತ್ರದ ರಾಜನಗರಿಯಲ್ಲಿ ಸತತ ೧೦ ದಿನಗಳ ಕಾಲ ಧಮ್ಮದೀಪೋತ್ಸವವನ್ನು ನೆರವೇರಿಸಿದ ಉಲ್ಲೇಖ ಬೌದ್ಧ ಸಾಹಿತ್ಯದಲ್ಲಿದೆ. ಪ್ರಚಲಿತ ಸಂದರ್ಭದಲ್ಲಿ ಬೌದ್ಧ ಉಪಾಸಕರು ತಮ್ಮ ಮನೆಗಳಲ್ಲಿ ಧಮ್ಮದೀಪ (ಸತ್ಯದ ಬೆಳಕು) ಕಾರ್ಯಕ್ರಮ ಆಯೋಜಿಸಿ ಬುದ್ಧನ ವೈಚಾರಿಕ ಚಿಂತನೆಗಳನ್ನು ಅನುಸರಿಸುವ ಮಾರ್ಗವನ್ನು ಕಂಡುಕೊಳ್ಳುತ್ತಿದ್ದಾರೇ ಎಂದು ಹೇಳಿದರು.
ಬೆಳಕೆಂಬುದು ಕಂದಾಚಾರ, ಸಂಪ್ರದಾಯ, ಮೂಢನಂಬಿಕೆಯ ಸಂಕೇತವೂ ಅಲ್ಲ. ಇರುವ ಕತ್ತಲೆಯನ್ನು ಹೊಡೆದೊಡಿಸಲು ಬೆಳಕು (ದೀಪ) ಬೇಕೇಬೇಕು. ಹಾಗೆಯೇ ಮನುಷ್ಯಮನದ ಕತ್ತಲೆ ಕಳೆಯಲು ಬುದ್ಧ ಬೆಳಕು ಅವಶ್ಯಕ ಹಾಗೂ ಅನಿವಾರ್ಯ. ಬಸವಾದಿ ಶರಣರ ಇಷ್ಟಲಿಂಗ, ಪ್ರಾಣಲಿಂಗ ಹಾಗೂ ಭಾವಲಿಂಗ ಪರಿಕಲ್ಪನೆಯಂತೆ ಬೆಳೆಯುತ್ತಾ ಬದಲಾಗುವ ಮೊದಲ ಹೆಜ್ಜೆ ಈ ಧಮ್ಮ ದೀಪೋತ್ಸವವಾಗಿದೆ ಎಂದು ಅಭಿಪ್ರಾಯಪಟ್ಟರು.
ನಾಗೇಶ ನೀಲನಾಯಕ ಮಾತನಾಡಿ, ಗೌತಮಬುದ್ಧನ ಉಪದೇಶಗಳ ಸಂಗ್ರಹವಾದ ತ್ರಿಪಿಟಕ ಗ್ರಂಥದಲ್ಲಿ; ಘನಸಾರಪ್ಪದಿತ್ತೇನೆ ದೀಪೇನ ತಮದಂಸಿನಾ, ತ್ರಿಲೋಕ ದೀಪಂ ಸಂಬುದ್ಧ ಪೂಜಯಾಮಿ ತಮೋನುದಂಛಿ ಹೀಗೆಂದರೆ `ಬೆಳಗುತ್ತಿರುವ ಕರ್ಪೂರದ ದೀಪದಿಂದ ಕತ್ತಲೆಯನ್ನು ಹೋಗಲಾಡಿಸುತ್ತಾ ಅಂಧಕಾರವನ್ನು ತೊಡೆದುಹಾಕುವ ತ್ರಿಲೋಕ ದೀಪನಾದ ಸಂಬುದ್ಧನನ್ನು ಪೂಜಿಸುತ್ತೇನೆ ಎಂದರ್ಥವಾಗುತ್ತದೆ. ಇಂತಹ ಬೆಳಕಿನ ಬುದ್ಧನಿಂದ ಪ್ರತಿಯೊಬ್ಬನ ಬಾಳನ್ನು ಬೆಳಕಾಗಿಸಿಕೊಳ್ಳಲು ಬೆಳಕನ್ನು ಪಡೆಯಲು ಈ ಧಮ್ಮ ದೀಪೋತ್ಸವ ಪ್ರೇರಣೆ ನೀಡಲಿದೆ ಎಂದು ತಿಳಿಸಿದರು.
ಡಾ.ಪಂಚಶೀಲ, ಶಿಕ್ಷಕ ಸುಭಾಸಚಂದ್ರ ಜಾಧವ ಮಾತನಾಡಿದರು. ಈ ಸಂದರ್ಭದಲ್ಲಿ ಧರ್ಮಣ್ಣ ಜೈ ಭೀಮ ಹಾಗೂ ಪತ್ರಕರ್ತ ಸುಭಾಷ ಹೊದ್ಲುರ ಅವರನ್ನು ಸನ್ಮಾನಿಸಲಾಯಿತು. ಪರಸುರಾಮ ನೀಲನಾಯಕ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ಪುರುಷ ಹಾಗೂ ಮಹಿಳಾ ಬೌದ್ಧ ಉಪಾಸಕರು ಉಪಸ್ಥಿತರಿದ್ದರು.