ಕಣಿವೆಕೊಪ್ಪಲು ಸಮೀಪದ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷ

16-pnp 1
Published on

ಪಾಂಡವಪುರ: ತಾಲೂಕಿನ ಕಣಿವೆಕೊಪ್ಪಲು ಗ್ರಾಮ ಸಮೀಪದ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿರುವ ಹಿನ್ನೆಲೆಯಲ್ಲಿ ಅರಣ್ಯಾಧಿಕಾರಿಗಳು ಮೊಸಳೆ ಸೆರೆ ಹಿಡಿಯಲು ಬೋನು ಇರಿಸಿದ್ದಾರೆ.


ಕೆರೆಯಲ್ಲಿ ಮೊಸಳೆ ಒಂದು ದಡದಿಂದ ಮತ್ತೊಂದು ದಡಕ್ಕೆ ಸಂಚರಿಸುತ್ತಿರುವ ದೃಶ್ಯವನ್ನು ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದರು. ಹೀಗಾಗಿ ಸ್ಥಳೀಯರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಸೆರೆಗೆ ಬೋನಿನಲ್ಲಿ ಕೋಳಿ ಇಟ್ಟಿದ್ದಾರೆ.


ಕಣಿವೆಕೊಪ್ಪಲು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳಾದ ಬೇಬಿ, ಶಿಂಡಬೋಗನಹಳ್ಳಿ ಹಾಗೂ ಪಟ್ಟಣದ ಹಿರೋಡೆ ಕೆರೆಯಲ್ಲೂ ಮೊಸಳೆ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ. ಹಸು, ಕರು, ಕುರಿ, ಮೇಕೆ ಸೇರಿದಂತೆ ಅನೇಕ ಸಾಕುಪ್ರಾಣಿಗಳಿಗೆ ನೀರು ಕುಡಿಸಲು, ಬಟ್ಟೆ ಒಗೆಯಲು, ಪಾತ್ರೆ ತೊಳೆಯುವುದು ಸೇರಿದಂತೆ ಅನೇಕ ಕೆಲಸ ಕಾರ್ಯಗಳಿಗೆ ಗ್ರಾಮಸ್ಥರು ನೀರು ಬಳಕೆ ಮಾಡುತ್ತಿದ್ದು, ಕೆರೆ ನೀರಿಗೆ ಇಳಿದಾಗ ಏನಾದರೂ ಅನಾಹುತ ಸಂಭವಿಸಿದರೆ ಎಂಬ ಭಯ ಕಾಡುತ್ತಿದೆ. ಜತೆಗೆ ಇದೇ ಭಾಗದಲ್ಲಿ ಚಿರತೆಗಳ ಹಾವಳಿ ಕೂಡ ಹೆಚ್ಚಾಗಿದ್ದು, ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net