

ಎಚ್.ಡಿ.ಕೋಟೆ: ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲರಿಗೆ ವಸತಿ ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಹಣ ಬಳಕೆ ಮಾಡಲು ಸ್ವತಂತ್ರ ಹಕ್ಕು ಇದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿ ಅವರ ಮೇಲೆ ಶಿಸ್ತು ಕ್ರಮಕ್ಕೆ ಇಲಾಖೆ ಮೇಲ್ಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಜಿಲ್ಲಾ ಗಿರಿಜನ ಸಮನ್ವಯ ಯೋಜನಾ ಅಧಿಕಾರಿ ಮಲ್ಲೇಶ್ ತಿಳಿಸಿದರು.
ತಾಲೂಕಿನ ಸೊಳ್ಳೆಪುರ ಏಕಲವ್ಯ ವಸತಿ ಶಾಲೆಗೆ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳ ಜತೆ ಶುಕ್ರವಾರ ಭೇಟಿ ನೀಡಿ ವಸತಿ ಶಾಲೆಯ ಪ್ರಾಂಶುಪಾಲ ರಾಕೇಶ್ ಚಂದ್ರವರ್ಮ ಅವರನ್ನು ತರಾಟೆಗೆ ತೆಗೆದುಕೊಂಡರು.
ವಸತಿ ಶಾಲೆಯಲ್ಲಿ ಮಕ್ಕಳಿಗೆ ಕಳೆದ ಆರು ತಿಂಗಳಿಂದ ದಿನ ಬಳಕೆಗೆ ಬೇಕಾದ ಅಗತ್ಯ ಸೌಕರ್ಯಗಳನ್ನು ಒದಗಿಸಿಲ್ಲ ಎಂದು ಪಾಲಕರು ಆರೋಪಿಸಿದ ಹಿನ್ನೆಲೆಯಲ್ಲಿ ಗುರುವಾರ ತಹಸೀಲ್ದಾರ್ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಅಗತ್ಯ ಸೌಕರ್ಯಗಳನ್ನು ಒದಗಿಸಲು ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಭೇಟಿ ನೀಡಿದ ಮಲ್ಲೇಶ್ ಅವರು, ಕಡತಗಳನ್ನು ಪರಿಶೀಲನೆ ನಡೆಸಿ ಆಗಸ್ಟ್ ತಿಂಗಳಲ್ಲಿ ಏಕಲವ್ಯ ವಸತಿ ಶಾಲೆಯ ನಿರ್ವಹಣೆಗೆ 18 ಲಕ್ಷ ರೂ. ಅನುದಾನ ಬಂದಿದ್ದರೂ ವಸತಿ ಶಾಲೆಯ ಮಕ್ಕಳಿಗೆ ದಿನ ಬಳಕೆಗೆ ಬೇಕಾದ ಸೋಪು, ಪೇಸ್ಟ್, ಬ್ರಷ್ ಸೇರಿದಂತೆ ಅಗತ್ಯ ಸೌಕರ್ಯಗಳನ್ನು ಏಕೆ ಖರೀದಿ ಮಾಡಿಲ್ಲ? ಆರು ತಿಂಗಳಿಂದ ಇಂತಹ ಸಮಸ್ಯೆ ಇದ್ದರೂ ಇಲಾಖೆ ಗಮನಕ್ಕೆ ಏಕೆ ತಂದಿಲ್ಲ? ಸಾಕಷ್ಟು ಹಣವಿದ್ದು, ಖರ್ಚು ಮಾಡಲು ಸ್ವತಂತ್ರೃವಿದ್ದರೂ ನೀವು ಏಕೆ ಮಕ್ಕಳಿಗೆ ಮೂಲ ಸೌಕರ್ಯ ಒದಗಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಪ್ರಾಂಶುಪಾಲರು ರಾಕೇಶ್ ಚಂದ್ರವರ್ಮ ಮಾತನಾಡಿ, ಇಲಾಖೆಯಿಂದ ಸರಬರಾಜು ಆಗುತ್ತದೆ ಎಂಬ ಕಾರಣಕ್ಕಾಗಿ ನಾವು ಖರೀದಿ ಮಾಡಲಿಲ್ಲ. ಜತೆಗೆ ನಮ್ಮ ಸಹೋದ್ಯೋಗಿಗಳು ಕೂಡ ಸರಿಯಾದ ಮಾರ್ಗದರ್ಶನ ನೀಡಲಿಲ್ಲ ಎಂದು ಉತ್ತರಿಸಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಯೋಜನಾಧಿಕಾರಿಗಳು ಇಷ್ಟಾದರೂ ಏಕೆ ಇಲಾಖೆ ಗಮನಕ್ಕೆ ತರಲಿಲ್ಲ? ನೀವು ಈ ಮೊದಲೇ ತಂದಿದ್ದರೆ ಸಮಸ್ಯೆ ಬಗೆಹರಿಸಲು ಕ್ರಮ ವಹಿಸುತ್ತಿದ್ದೇವು. ನೀವು ಬೇಜವಾಬ್ದಾರಿಯಿಂದ ಕೆಲಸ ಮಾಡಿದ್ದೀರಾ? ನಿಮಗೆ ವಸತಿ ಶಾಲೆಯಲ್ಲಿ ಕೆಲಸ ಮಾಡುವ ಇಚ್ಛಾಶಕ್ತಿ ಇಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ನಂತರ ಮಾಧ್ಯಮದವರ ಜತೆ ಮಾತನಾಡಿದ ಯೋಜನಾಧಿಕಾರಿಗಳು ಪ್ರಾಂಶುಪಾಲರು ನೇರವಾಗಿ ಕೇಂದ್ರ ಸರ್ಕಾರದಿಂದ ಬಂದಿದ್ದೇವೆ ಎಂಬ ಅಹಂನಿಂದ ಈ ರೀತಿ ವರ್ತನೆ ಮಾಡುತ್ತಿದ್ದಾರೆ. ಹಾಗಾಗಿ ಇವರ ಮೇಲೆ ಶಿಸ್ತು ಕ್ರಮ ಜರುಗಿಸಲು ಇಲಾಖೆಯ ಮೇಲ್ಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ. ಇನ್ಮುಂದೆ ಏಕಲವ್ಯ ವಸತಿ ಶಾಲೆ ಮೇಲುಸ್ತುವಾರಿಯನ್ನು ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿಗಳು ನೋಡಿಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಇಂತಹ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಾಗಿ ಪಾಲಕರಿಗೆ ಭರವಸೆ ನೀಡಿದರು.
ನಂತರ ವಸತಿ ಶಾಲೆಯ ಎಲ್ಲ ಮಕ್ಕಳಿಗೆ ಜಿಲ್ಲಾ ಗಿರಿಜನ ಯೋಜನಾಧಿಕಾರಿ ಸೋಪು ವಿತರಣೆ ಮಾಡಿದರು. ನಂತರ ಅಡುಗೆ ತಯಾರಿಸುವ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿದರು. ಮೆನು ಚಾರ್ಟ್ ಪ್ರಕಾರ ಊಟ, ತಿಂಡಿ ನೀಡುತ್ತಿದ್ದಾರೆ ಎಂಬುದನ್ನು ಪರಿಶೀಲನೆ ನಡೆಸಿದರು. ಅಡುಗೆ ಸಿಬ್ಬಂದಿಗೆ ಸ್ವಚ್ಛತೆ ಕಾಪಾಡಲು ತಿಳಿಸಿದರು.
ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಜಿ.ಆರ್. ಮಹೇಶ್, ಕಚೇರಿ ವ್ಯವಸ್ಥಾಪಕ ನಾಗರಾಜು, ವಸತಿ ಶಾಲೆಯ ವಾರ್ಡನ್ ಆರತಿ, ಸಂತೋಷ್, ಸಿಬ್ಬಂದಿ ಲೋಕೇಶ್, ರವೀಶ್, ಪಾಲಕರ ಸಮಿತಿ ಅಧ್ಯಕ್ಷ ಜಿ. ಸ್ವಾಮಿ, ಪಾಲಕರಾದ ನಟರಾಜು, ಶಿವರಾಜ ಇದ್ದರು.