ಎಲ್ಲ ಸಮುದಾಯದ ಕಲ್ಯಾಣದ ಆಶಯದೊಂದಿಗೆ ಉತ್ತಮ ಬಜೆಟ್ ಮಂಡನೆ: ಕೆ.ಎಂ. ಶಿವಲಿಂಗೇಗೌಡ

ShivalingeGowda
Published on

ಹಾಸನ: ನಾಡಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಹಿಡಿದು, ರಾಜ್ಯದ ಹಳ್ಳಿಗಳವರೆಗೆ ಅಭಿವೃದ್ಧಿ ಜೊತೆಗೆ ಎಲ್ಲ ಸಮುದಾಯದ ಕಲ್ಯಾಣದ ಆಶಯದೊಂದಿಗೆ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡ ಶ್ಲಾಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರಿಗಿರುವ ಸುದೀರ್ಘ ರಾಜಕೀಯ ಅನುಭವ, ರಾಜ್ಯದ ಸರ್ವತೋಮುಖ ಅಭಿವೃದ್ಧಿಯಲ್ಲಿ ಅವರಿಗಿರುವ ದೃಷ್ಟಿಕೋನ, ರೈತರು ಸೇರಿದಂತೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಶೋಷಿತ ಸಮುದಾಯಗಳ ಬಗೆಗಿನ ಕಾಳಜಿ ಬಜೆಟ್‌ನಲ್ಲಿ ವ್ಯಕ್ತವಾಗಿದೆ ಎಂದರು.

ರಾಜ್ಯದ ಅಭಿವೃದ್ಧಿ ದೃಷ್ಟಿಕೋನಕ್ಕೆ ಪೂರಕವಾಗಿ ಜನಪ್ರಿಯ ಬಜೆಟ್‌ನ್ನು ಮಂಡಿಸಿರುವುದಕ್ಕೆ ಸಿಎಂಗೆ ಅಭಿನಂದನೆ ಸಲ್ಲಿಸಿದ ಕೆಎಂಶಿ, ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುವುದರ ಜೊತೆಗೆ ಅವುಗಳಿಗೆ ಪ್ರತ್ಯೇಕ ಅನುದಾನ ಮೀಸಲಿಡುವ ಮೂಲಕ ಗ್ಯಾರಂಟಿ ಯೋಜನೆಗಳನ್ನು ಟೀಕೆ ಮಾಡುತ್ತಿದ್ದ, ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದ ಪ್ರತಿಪಕ್ಷ ನಾಯಕರಿಗೆ, ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ ಎಂದರು.

ಕೃಷಿ, ಆರೋಗ್ಯ, ಸಾರಿಗೆ, ಶಿಕ್ಷಣ, ನೀರಾವರಿ, ವಿಜ್ಞಾನ-ತಂತ್ರಜ್ಞಾನ ಹೀಗೆ ಪ್ರತಿಯೊಂದು ಕ್ಷೇತ್ರವನ್ನೂ ಗಮನದಲ್ಲಿ ಇಟ್ಟುಕೊಂಡು ಈ ಕ್ಷೇತ್ರಗಳ ಬಲವರ್ಧನೆಗೆ

ಅನುಗುಣವಾಗಿ ಆಯವ್ಯಯದಲ್ಲಿ ಅನುದಾನ ಕಾಯ್ದಿರಿಸುವುದರ ಜೊತೆಗೆ ಹೊಸ ಯೋಜನೆಗಳನ್ನೂ ಕೈಗೆತ್ತಿಕೊಂಡಿರುವುದು ಸಿಎಂ ಅವರ ದೂರದೃಷ್ಟಿ ಹಾಗೂ

ಜನಪರ ಕಾಳಜಿಗೆ ಹಿಡಿದ ಕೈಗನ್ನಡಿ ಎಂದರು.

ವಿಶ್ವಖ್ಯಾತಿ ಪಡೆದಿರುವ ಬೆಂಗಳೂರು ಜೊತೆಗೆ ಗ್ರಾಮೀಣ ಭಾಗದ ಬೆಳವಣಿಗೆಗೂ ಬಜೆಟ್‌ನಲ್ಲಿ ಒತ್ತು ನೀಡಿರುವುದು ಗಮನಾರ್ಹ ಎಂದು ಹೇಳಿದರು.

ಇದೇ ವೇಳೆ ಹಾಸನ ಜಿಲ್ಲೆಯ ಕಾಡಾನೆ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಸಂಬಂಧ ರೈಲ್ವೆ ಬ್ಯಾಡಿಕೇಡ್ ನಿರ್ಮಾಣಕ್ಕೆ ಹಣ, ಆನೆಧಾಮ ನಿರ್ಮಾಣಕ್ಕೆ 20 ಕೋಟಿ ನೀಡಿರುವುದನ್ನು ಶಾಸಕರು ಶ್ಲಾಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net