

ಹಾಸನ: ಕರ್ನಾಟಕ ಸರ್ಕಾರದ ಆದೇಶದಂತೆ ಹಸಿ ಶುಂಠಿ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಅತೀ ಶೀಘ್ರವಾಗಿ ಜಿಲ್ಲೆಯ ಎಲ್ಲ ತಾಲೂಕಿನಲ್ಲೂ ಖರೀದಿ ಕೇಂದ್ರ ತೆರೆದು ಶುಂಠಿಯನ್ನು ರೈತರಿಂದ ಖರೀದಿ ಮಾಡುವ ಮೂಲಕ ರೈತರ ಸಂಕಷ್ಟ ಕಡಿಮೆ ಮಾಡುವಂತೆ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ಒತ್ತಾಯಿಸಿದರು.
ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಅಡಿ ಹಸಿ ಶುಂಠಿ ಖರೀದಿಸಲು ಶೀಘ್ರ ಖರೀದಿ ಕೇಂದ್ರ ತೆರೆಯಬೇಕು. ಜಿಲ್ಲೆಯಲ್ಲಿ ಸಾವಿರಾರು ಎಕರೆಯಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಹೀಗಾಗಿ ಶುಂಠಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಆಗ್ರಯಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪ್ರತಿ ಕೆಜಿಗೆ 24.45 ರೂ.ಗಳಲ್ಲಿ ಶುಂಠಿ ಖರೀದಿ ಮಾಡಲು ಒಪ್ಪಿಗೆ ಸೂಚಿಸಿದೆ. ಆದರೆ ಶುಂಠಿ ಬೆಳೆಯಲು ರೈತರಿಗೆ ಹೆಚ್ಚು ಖರ್ಚು ಬೀಳುತ್ತಿದೆ. ಹೀಗಾಗಿ ಕನಿಷ್ಠ ಪ್ರತಿ ಕೇಜಿಗೆ 42 ರೂ. ನಿಗದಿ ಮಾಡುವಂತೆ ಒತ್ತಾಯಿಸಲಾಗಿತ್ತು. ಆದರೆ ಕೇವಲ 24.45 ರೂ. ಗಳಲ್ಲಿ ಶುಂಠಿ ಖರೀದಿಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈ ಸಂಬಂಧ ನ್ಯಾಯಾಲಯದ ಮೂಲಕ ಖರೀದಿ ದರ ಏರಿಕೆ ಮಾಡಲು ಹೋರಾಟ ನಡೆಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರದ ಆದೇಶದಂತೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಹಸಿ ಶುಂಠಿ ಖರೀದಿ ಕೇಂದ್ರವನ್ನು ಶೀಘ್ರ ಪ್ರಾರಂಭಿಸಬೇಕು. ಯಾವ ರೈತರ ಬಳಿ ಶುಂಠಿ ಇದೆ ಅವರು ಎಪಿಎಂಸಿಗೆ ತಂದುಕೊಡಬೇಕು. ಇಲ್ಲಿ ಯಾವ ರೀತಿ ಮೋಸ ಆಗುವುದಿಲ್ಲ. ಜಿಲ್ಲಾಧಿಕಾರಿಗಳ ಮೇಲೆ ಭರವಸೆ ಇದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಪಾಲಾಕ್ಷ, ಮಂಜುನಾಥ್, ಬಸವರಾಜು, ಭೂಮೇಶ್ ಇತರರು ಉಪಸ್ಥಿತರಿದ್ದರು.