ಉಚಿತ ಹೃದಯ ರೋಗ ತಪಾಸಣೆ

bkt-26-5
Published on

ಬಾಗಲಕೋಟೆ: ವಿವಿಕೆ ಫೌಂಡೇಷನ್‌ ವತಿಯಿಂದ ನಾರಾಯಣ ಹೃದಯಾಲಯದ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಉಚಿತ ಹೃದಯ ರೋಗ ತಪಾಸಣೆ ಶಿಬಿರಗಳನ್ನು ಆಯೋಜಿಸಲಾಗುವುದು ಎಂದು ಫೌಂಡೇಷನ್‌ ಸಂಸ್ಥಾಪಕಿ ವೀಣಾ ಕಾಶಪ್ಪನವರ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರೂ ಹೃದಯಾಘಾತದಿಂದ ಮರಣ ಹೊಂದುತ್ತಿದ್ದಾರೆ. ಹೃದಯ ರೋಗಿಗಳ ಸಂಖ್ಯೆ ಹೆಚ್ಚಿದೆ. ಆ ಹಿನ್ನಲೆಯಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆಗೂ ಕೆಲವರಿಗೆ ನೆರವು ನೀಡಲಾಗುವುದು ಎಂದರು.

ಮಹಿಳೆಯರಿಗಾಗಿಯೇ ಸರ್ಕಾರದಿಂದ ಸಾಕಷ್ಟು ಸಾಲ ಸೌಲಭ್ಯಗಳಿವೆ. ಜಾಗೃತಿ ಕೊರತೆಯಿಂದ ಅವುಗಳನ್ನು ಅವರಿಗೆ ಪಡೆಯಲು ಸಾಧ್ಯವಾಗುವುದಿಲ್ಲ. ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು. ಅವರನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಮಹಿಳಾ ಸೌಹಾರ್ದ ಬ್ಯಾಂಕ್‌ ಸಹ ಆರಂಭಿಸಲಾಗುವುದು ಎಂದು ಹೇಳಿದರು.

ಜ.6ರಂದು ತುಳಸಿಗೇರಿ ಹನಮಪ್ಪನ ಕಾರ್ತಿಕೋತ್ಸವ ಇದೆ. ಲೋಕ ಕಲ್ಯಾಣಕ್ಕಾಗಿ ಅಂದು ಸಂಜೆ 4 ಗಂಟೆಗೆ ವಿದ್ಯಾಗಿರಿಯಿಂದ ತುಳಸಿಗೇರಿಯವರೆಗೆ ಯುವಕರು, ಕಾರ್ಯಕರ್ತರೊಂದಿಗೆ ಪಾದಯಾತ್ರೆ ಮಾಡಲಿದ್ದೇನೆ ಎಂದರು.

ಕ್ಷಮೆ ಕೇಳಲಿ: ಹೆಣ್ಣುಮಕ್ಕಳ ಬಗ್ಗೆ ತಾತ್ಸಾರವಾಗಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ್‌ ಭಟ್ ಮಹಿಳೆಯರ ಕ್ಷಮೆ ಕೇಳಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಕಾಶಪ್ಪನವರ ಆಗ್ರಹಿಸಿದರು.‌

ಮಹಿಳೆ ಪೂಜ್ಯನೀಯ ಎಂದು ಬಾಯಿ ಮಾತಿನಲ್ಲಿ ಹೇಳಿದರೆ ಸಾಲದು. ಆಚರಣೆಯಲ್ಲಿಯೂ ಇರಬೇಕು ಎಂದರು.

ಸಂಸತ್‌ಗೆ ರಕ್ಷಣೆ ಮಾಡದವರು ದೇಶ ರಕ್ಷಣೆ ಹೇಗೆ ಮಾಡುತ್ತಾರೆ. ಮಾತನಾಡಲು ಅವಕಾಶ ಕೇಳಿದ 142 ಸಂಸದರನ್ನು ಅಮಾನತು ಮಾಡಲಾಗಿದೆ. ಮಾತನಾಡಲು ಅವಕಾಶವಿರದಿದ್ದರೆ, ಸಂಸತ್ತು ಏಕೆ ಬೇಕು? ಸಂವಿಧಾನ ತಿರುಚುವ ಕೆಲಸ ಆಗುತ್ತಿದೆ ಎಂದು ಟೀಕಿಸಿದರು.

ವೀರಶೈವ ಲಿಂಗಾಯತರಿಗೆ ಕೇಂದ್ರದಲ್ಲಿ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಜಿಲ್ಲಾ ವಕ್ತಾರ ಚಂದ್ರಶೇಖರ ರಾಠೋಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net