ಆಪರೇಷನ್ ಕಮಲ ವಿರೋಧಿಸಿ ಸಿಎಂ ಮನೆಗೆ ಮುತ್ತಿಗೆ ಬೆದರಿಕೆ

19 smg Sundresh
Published on

ಶಿವಮೊಗ್ಗ: ಪುರಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡದಿದ್ದರೆ ಶಿಕಾರಿಪುರದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಬೆದರಿಕೆ ಹಾಕಿದ್ದಾರೆ.

ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ. ರಾಘವೇಂದ್ರ ಅವರು ಕೀಳುಮಟ್ಟದ ರಾಜಕಾರಣ ಬಿಡಬೇಕು. ಶಿಕಾರಿಪುರ ಪುರಸಭೆಯ ಇಬ್ಬರು ಕಾಂಗ್ರೆಸ್ ಸದಸ್ಯರ ರಾಜೀನಾಮೆ ತಿರಸ್ಕರಿಸಿ ಜನಾದೇಶದಂತೆ ಕಾಂಗ್ರೆಸ್​ಗೆ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಅವರಿಗೆ ಜನ ಹಿತಕ್ಕಿಂತ ಅಧಿಕಾರವೇ ಮುಖ್ಯವಾಗಿದೆ. ಶಿಕಾರಿಪುರ ಪುರಸಭೆಯಲ್ಲೂ ‘ಆಪರೇಷನ್ ಕಮಲ’ ಮೂಲಕ ಅದನ್ನು ಸಾಬೀತುಪಡಿಸಿದ್ದಾರೆ. ಶಿಕಾರಿಪುರ ಪುರಸಭೆಯಲ್ಲಿ ಬಿಜೆಪಿಗೆ ಬಹುಮತ ಇಲ್ಲದಿದ್ದರೂ ಜನಾದೇಶ ಧಿಕ್ಕರಿಸಿ ಅಧಿಕಾರ ಹಿಡಿಯಲೇಬೇಕೆಂದು ಹೊರಟಿದ್ದಾರೆ. ಇದು ಮುಖ್ಯಮಂತ್ರಿ ಸ್ಥಾನದಲ್ಲಿ ಇರುವವರಿಗೆ ಶೋಭೆ ತರುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಯಲ್ಲಿ 23 ಸ್ಥಾನಗಳ ಪೈಕಿ ಕಾಂಗ್ರೆಸ್​ಗೆ 12, ಬಿಜೆಪಿಗೆ 8 ಹಾಗೂ ಮೂವರು ಪಕ್ಷೇತರರು ಜಯಗಳಿಸಿದ್ದು, ಸಿಎಂ ಕ್ಷೇತ್ರವಾದರೂ ಜನ ಕಾಂಗ್ರೆಸ್​ಗೆ ಬೆಂಬಲ ನೀಡಿದ್ದರು. ಆದರೆ ಇದೀಗ ಇಬ್ಬರು ಕಾಂಗ್ರೆಸ್ ಸದಸ್ಯರಿಗೆ ಆಮಿಷವೊಡ್ಡಿ ಬಿಜೆಪಿ ಪುರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಹೊರಟಿದೆ ಎಂದು ದೂರಿದರು.

ಇಡೀ ರಾಜ್ಯದಲ್ಲಿ ಕರೊನಾ ಭೀತಿಗೆ ಜನ ಕಂಗಾಲಾಗಿದ್ದಾರೆ. ಜನರ ಸಂಕಷ್ಟಕ್ಕೆ ಸ್ಪಂದಿಸುವ ಬದಲು ಸಿಎಂ ಮತ್ತು ಅವರ ಪುತ್ರ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಮುಂದಿನ ದಿನಗಳಲ್ಲಿ ಭಾರಿ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ವಿಚಾರ ನ್ಯಾಯಾಲಯದಲ್ಲಿದೆ. ಅದು ಇತ್ಯರ್ಥವಾಗುವ ಮೊದಲೇ ಸದಸ್ಯರಿಗೆ ಆಮಿಷವೊಡ್ಡುವ ಮೂಲಕ ರಾಜೀನಾಮೆ ಕೊಡಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.

ಕಳೆದ 25 ವರ್ಷಗಳಿಂದ ಪುರಸಭೆಯಲ್ಲಿ ಆಡಳಿತ ನಡೆಸಿದ ಬಿಜೆಪಿಯಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಅಲ್ಲಿ ಜನಸಾಮಾನ್ಯರ ಬದಲು ಸಿಎಂ ಮತ್ತು ಲೋಕಸಭಾ ಸದಸ್ಯರ ಕೆಲಸಗಳು ಮಾತ್ರ ಆಗುತ್ತಿವೆ. ಕಾಂಗ್ರೆಸ್​ನ ಮಹೇಶ್, ನಾಗರಾಜಗೌಡ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net