ದಾವಣಗೆರೆ: ವಿನಯ ಮಾರ್ಗ ಟ್ರಸ್ಟ್ ವತಿಯಿಂದ ನಗರದ ಅಭಿನವ ರೇಣುಕ ಮಂದಿರದಲ್ಲಿ ನ.26ರಂದು ಬೆಳಗ್ಗೆ 11 ಗಂಟೆಗೆ ಆಟೊ, ಲಾರಿ, ಗೂಡ್ಸ್ ವಾಹನ, ಟ್ಯಾಕ್ಸಿ ಚಾಲಕರಿಗೆ ಸನ್ಮಾನ ಹಾಗೂ ಅವರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ.
ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯು ಹಾಗೂ ಪದವಿಯಲ್ಲಿ ಶೇ.70ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ತಲಾ 1 ಸಾವಿರ ನಗದು, ನೆನಪಿನ ಕಾಣಿಕೆ, ಕಾಲೇಜು ಬ್ಯಾಗ್ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು ಎಂದು ಇನ್ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯ್‌ಕುಮಾರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಚಾಲಕರಿಗೆ ಸಮವಸ್ತ್ರ ನೀಡಿ ಗೌರವಿಸಲಾಗುವುದು. ಚಾಲಕರು ವಾಹನ ಚಾಲನಾ ಪರವಾನಗಿ ಪತ್ರ, ಆಧಾರ್ ಕಾರ್ಡ್, ವಿದ್ಯಾರ್ಥಿ ಅಂಕಪಟ್ಟಿಯ ನಕಲುಪ್ರತಿಯೊಂದಿಗೆ ಜನಸಂಪರ್ಕ ಕಚೇರಿ, ಮನೆ ನಂ. 2415/45, 10ನೇ ಅಡ್ಡರಸ್ತೆ, ಅಥಣಿ ಕಾಲೇಜು ರಸ್ತೆ, ಎಸ್‌ಎಸ್ ಬಡಾವಣೆ ಎ ಬ್ಲಾಕ್, ದಾವಣಗೆರೆ ಇಲ್ಲಿ ನ.24ರೊಳಗಾಗಿ ಹೆಸರು ನೋಂದಾಯಿಸಬೇಕೆಂದು ತಿಳಿಸಿದರು.
ಆಟೊ, ಟ್ಯಾಕ್ಸಿ ಚಾಲಕರ ಮಕ್ಕಳು ಹಣಕಾಸಿನ ಕೊರತೆಯಿಂದಾಗಿ ಶುಲ್ಕ ಭರಿಸಲಾಗದೆ ಶಿಕ್ಷಣ ವಂಚಿತರಾಗುತ್ತಿದ್ದಾರೆ. ಇದನ್ನು ಗಮನಿಸಿ ಈ ಪ್ರತಿಭಾ ಪುರಸ್ಕಾರ ಆಯೋಜಿಸಲಾಗಿದೆ. ಸುಮಾರು 1 ಸಾವಿರ ಪ್ರತಿಭಾನ್ವಿತರು ಬರುವ ನಿರೀಕ್ಷೆ ಇದೆ.
ಮುಂಬರುವ ದಿನಗಳಲ್ಲಿ ಅವರ ಶೈಕ್ಷಣಿಕ ಶುಲ್ಕವನ್ನು ನಮ್ಮ ಟ್ರಸ್ಟ್ ಭರಿಸುವ ಚಿಂತನೆ ಮಾಡಲಿದೆ. ಅಲ್ಲದೆ ಈ ಮಕ್ಕಳಿಗೆ ಐಎಎಸ್, ಕೆೆಎಎಸ್ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಉಚಿತ ತರಬೇತಿಯನ್ನೂ ನೀಡಲಿದೆ. ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಭಾಗವಹಿಸುವರು ಎಂದು ಹೇಳಿದರು.
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ, ಇತ್ತೀಚೆಗೆ ದಾವಣಗೆರೆಗೆ ಆಗಮಿಸಿದ್ದ ಸಚಿವ ಈಶ್ವರ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದೇನೆ. ಜಿಲ್ಲೆಯಿಂದ ಸಲ್ಲಿಕೆಯಾದ ಆರು ಅರ್ಜಿಗಳಲ್ಲಿ ಮೂವರ ಅರ್ಜಿಗಳು ಅಂತಿಮಗೊಂಡಿದ್ದು, ಅದರಲ್ಲಿ ನನ್ನ ಹೆಸರೂ ಇರುವ ಮಾಹಿತಿ ಇದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಎಂ. ಸಿದ್ದಲಿಂಗಪ್ಪ, ಆರ್.ಎಸ್. ಪರಮೇಶ್, ಶರತ್, ಜಿ. ಷಣ್ಮುಖಪ್ಪ, ಪುರಂದರ ಲೋಕಿಕೆರೆ ಇದ್ದರು.