ಅಲ್ಲಮಪ್ರಭುದೇವರ ನೂತನ ದೇವಸ್ಥಾನದ ಲೋಕಾರ್ಪಣೆ

Oplus_131072
Oplus_131072
Published on

ಬಾಗಲಕೋಟೆ: ಜಿಲ್ಲೆಯ ತೇರದಾಳದಲ್ಲಿ ನಿರ್ಮಾಣಗೊಂಡಿರುವ ಅಲ್ಲಮಪ್ರಭುದೇವರ ನೂತನ ದೇವಸ್ಥಾನದ ಲೋಕಾರ್ಪಣೆ ಅಂಗವಾಗಿ ನ.8 ರಿಂದ 11ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನದ ಜೀರ್ಣೊದ್ಧಾರ ಸಮಿತಿ ಅಧ್ಯಕ್ಷ ಜಗದೀಶ ಗುಡಗುಂಟಿ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಕ್ತರು ದೇಣಿಗೆ ನೀಡಿದ ₹6.25 ಕೋಟಿ ವೆಚ್ಚದಲ್ಲಿ ದೇವಸ್ಥಾನ ನಿರ್ಮಿಸಲಾಗಿದೆ. ಇನ್ನೂ ₹1.5 ಕೋಟಿ ವೆಚ್ಚದಷ್ಟು ಕೆಲಸಗಳು ಬಾಕಿ ಇವೆ. ಸರ್ಕಾರ, ರಾಜಕೀಯ ಪಕ್ಷಗಳಿಂದ ಯಾವುದೇ ದೇಣಿಗೆ ಪಡೆಯದೇ ಭಕ್ತರೇ ಸೇರಿ ನಿರ್ಮಾಣ ವೆಚ್ಚ ಭರಿಸಿದ್ದೇವೆ ಎಂದರು.

ನ.8 ರಂದು ಬೆಳಿಗ್ಗೆ 10ಕ್ಕೆ ರೈತ-ಸೈನಿಕ ಸಮಾವೇಶ ಜರುಗಲಿದ್ದು, ಕೋಲ್ಹಾಪುರ ಕನೇರಿ ಕಾಡಸಿದ್ದೇಶ್ವರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಸಿದ್ದು ಸವದಿ ಉದ್ಘಾಟಿಸುವರು. ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ  ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ಸಂಜೆ 6ಕ್ಕೆ  ಯುವಜನೋತ್ಸವ ನಡೆಯಲಿದ್ದು, ಮುಗಳಖೋಡ ಯಲ್ಲಾಲಿಂಗೇಶ್ವರಮಠದ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣವರ ಭಾಗಿಯಾಗಲಿದ್ದಾರೆ ಎಂದರು.

ನ.9ರಂದು ಬೆಳಿಗ್ಗೆ 10ಕ್ಕೆ ಜಾನಪದ ಸಂಭ್ರಮ ಜರುಗಲಿದ್ದು, ಜಾನಪದ ವಿದ್ವಾಂಸ ಶಂಭು ಬಳಿಗಾರ ಭಾಗಿಯಾಗುವರು. ಸಂಸದರಾದ ಪಿ.ಸಿ.ಗದ್ದಿಗೌಡರ, ಗೋವಿಂದ ಕಾರಜೋಳ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಭಾಗಿಯಾಗುವರು.  ಮಧ್ಯಾಹ್ನ 3ಕ್ಕೆ ಬಸವೇಶ್ವರ ವೃತ್ತದಲ್ಲಿ ಅಶ್ವಾರೂಢ ಬಸವೇಶ್ವರ ಮೂರ್ತಿ ಅನಾವರಣಗೊಳ್ಳಲಿದ್ದು, 4ಕ್ಕೆ ನೀಲಕಂಠೇಶ್ವರ ಮಠದಿಂದ ವಚನಗ್ರಂಥಗಳ ಭವ್ಯ ಮೆರವಣಿಗೆ ಜರುಗಲಿದೆ. 6 ಸಾವಿರ ವಚನ ಪುಸ್ತಕಗಳ ಮೆರವಣಿಗೆ ಮಾಡಲಿದ್ದು, ಆನೆ, ಒಂಟಿ, ಕಲಾ ತಂಡಗಳು ಪಾಲ್ಗೊಳ್ಳಲಿವೆ. ಸಂಜೆ 6ಕ್ಕೆ ಬಸವ ಮಹಾಪುರಾಣ ಮಂಗಲಗೊಳ್ಳಲಿದೆ ಎಂದು ತಿಳಿಸಿದರು.

ನ.10ರಂದು 111 ಮಂಟಪ ಪೂಜೆ ಜರುಗಲಿದ್ದು, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ. ಸಂಜೆ 5ಕ್ಕೆ ಮಹಿಳಾ ಸಮಾವೇಶ ಏರ್ಪಡಿಸಲಾಗಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ, ಚಲನಚಿತ್ರ ನಟಿ ಆದಿತಿ ಪ್ರಭುದೇವ ಸೇರಿದಂತೆ ಗಣ್ಯರು ಭಾಗಿಯಾಗುವರು ಎಂದರು.

ನ.11ರಂದು ಬೆಳಿಗ್ಗೆ ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಶಿವಮೊಗ್ಗದ ಮಲ್ಲಿಕಾರ್ಜುನ ಮುರಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಬೆಳಗ್ಗೆ 9ಕ್ಕೆ ಅಲ್ಲಮ ಪ್ರಭುದೇವರ ನೂತನ ದೇವಸ್ಥಾನದ ಕಳಸಾರೋಹಣ ಹಾಗೂ ಲೋಕಾರ್ಪಣೆ ಜರುಗಲಿದೆ ಎಂದು ತಿಳಿಸಿದರು.

ಚಿಮ್ಮಡ ವಿರಕ್ತಮಠದ ಪ್ರಭು ಸ್ವಾಮೀಜಿ ಮಾತನಾಡಿ, ಅಲ್ಲಮ ಪ್ರಭುದೇವರ ದೇವಸ್ಥಾನ ನಿರ್ಮಾಣ, ಕಾರ್ಯಕ್ರಮಕ್ಕೆ ಭಕ್ತರಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ. ದಾಸೋಹವನ್ನು ವಿವಿಧ ಗ್ರಾಮಗಳ ಭಕ್ತರೇ ನಡೆಸಿಕೊಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net