

ಅರಕಲಗೂಡು: ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಬೀಗ ಬಿದ್ದಿದ್ದು ಬಡವರ ಹೊಟ್ಟೆ ತುಂಬಿಸ ಬೇಕಾಗಿದ್ದ ಕ್ಯಾಂಟೀನ್ ಇದ್ದೂ ಇಲ್ಲವಾಗಿ ಸಾರ್ವಜನಿಕರ ನಿರಾಸೆಗೆ ಕಾರಣವಾಗಿದೆ.
ಬಡವರಿಗೆ ಕಡಿಮೆ ದರದಲ್ಲಿ ಊಟ, ತಿಂಡಿ ಪೂರೈಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೊಳಿಸಿದ್ದ ಕ್ಯಾಂಟೀನ್ ಬಡವರ ಊಟ ಉಪಹಾರ ಮಂದಿರ ಎಂದೇ ಪ್ರಸಿದ್ಧಿ ಪಡೆದಿತ್ತು. ಪಟ್ಟಣದ ಹೃದಯ ಭಾಗದಲ್ಲಿರುವ ತೆರೆದಿದ್ದ ಕ್ಯಾಂಟೀನ್ ಕಳೆದೊಂದು ವಾರದಿಂದ ಬಾಗಿಲು ಮುಚ್ಚಲಾಗಿದೆ.
ಪಟ್ಟಣದಲ್ಲಿರುವ ಇಂದೀರಾ ಕ್ಯಾಂಟೀನ್ ಆರಂಭವಾದಾಗ ಇಲ್ಲಿಯ ಬಡವರು, ಕೂಲಿ ಕಾರ್ಮಿಕರು,ಆಸ್ಪತ್ರೆಗೆ ಆಗಮಿಸುವ ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ಸಾಕ?್ಟು ಅನುಕೂಲವಾಗಿತ್ತು. ಐದು ರೂಪಾಯಿಗೆ ಉಪಹಾರ ಮತ್ತು 10 ರೂಪಾಯಿಗೆ ಊಟ ಸಿಗುತ್ತಿತ್ತು. ಕ್ಯಾಂಟೀನ್ ಕಾಲೇಜು, ಬಸ್ಸ್ ನಿಲ್ದಾಣ, ತಾಲ್ಲೂಕು ಆಸ್ಪತ್ರೆ, ತರಕಾರಿ ಮಾರುಕಟ್ಟೆ, ಮತ್ತು ಪಶು ಆಸ್ಪತ್ರೆ ಸೇರಿದಂತೆ ಪ್ರಮುಖ ಸ್ಥಳದಲ್ಲಿದ್ದ ಕಾರಣ ಸಾಕಷ್ಟ್ಟು ಜನರು ಆಗಮಿಸುತ್ತಿದ್ದರು. ಕೆಲವೊಂದು ಸಲ ಕ್ಯಾಂಟೀನ್ ನಲ್ಲಿ ಟೋಕನ್ ಸಿಗದೆ ಊಟ ಸಿಗದೆ ಬಡವರು ಖಾಲಿ ಹೊಟ್ಟೆಯಲ್ಲಿ ಮರಳುವಷ್ಟು ಬೇಡಿಕೆ ಇತ್ತು. ಇದೀಗ ಕಡಿಮೆ ದರದಲ್ಲಿ ಬಡವರ, ದಿನಗೂಲಿಗಳ, ರೋಗಿಗಳ, ವಿದ್ಯಾರ್ಥಿಗಳ ಹೊಟ್ಟೆ ತುಂಬಿಸುತ್ತಿದ್ದ ಬಡವರ ಅನ್ನಪೂರ್ಣೆ ಕಣ್ಣು ಮುಚ್ಚಿದೆ ಎಂದು ಸಾರ್ವಜನಿಕರು ಅಸಮಧಾನ ಹೊರ ಹಾಕಿದ್ದಾರೆ.
ಗುತ್ತಿಗೆದಾರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಯಿಂದಾಗಿ ಕ್ಯಾಂಟೀನ್ ಬಂದ್ ಆಗಿದೆ. ಆರಂಭದಲ್ಲಿ ಕಾರಣಾಂತರಗಳಿಂದ ಕೆಲಕಾಲ ಬಾಗಿಲು ಮುಚ್ಚುತ್ತಿದ್ದ ಇಂದೀರಾ ಕ್ಯಾಂಟೀನ್ ಈ ಬಾರಿ ಬಂದ್ ಆಗಿ ಒಂದು ವಾರವೇ ಗತಿಸಿದೆ .ಪ್ರತಿನಿತ್ಯ ಬಡವರು ಕೂಲಿ ಕಾರ್ಮಿಕರು ಇಂದೀರಾ ಕ್ಯಾಂಟೀನ್‌ಗೆ ಎಡತಾಕುವುದೇ ಕೆಲಸವಾಗಿದೆ. ದಿನನಿತ್ಯ ಕ್ಯಾಂಟೀನ್ ಆರಂಭವಾಗಿದೆ ಎನ್ನುವ ಖುಷಿಯಲ್ಲಿ ಬರುವ ಬಡವರು ಕೂಲಿ ಕಾರ್ಮಿಕರು ಕ್ಯಾಂಟೀನ್ ಬಂದ್ ಆಗಿದ್ದು ನೋಡಿ ಸಪ್ಪೆ ಮುಖ ಮಾಡಿಕೊಂಡು ಖಾಸಗಿ ಹೋಟೆಲ್‌ಗಳಿಗೆ ಹೋಗುತ್ತಿದ್ದಾರೆ. 50ರಿಂದ 100 ರೂಪಾಯಿ ದುಬಾರಿ ದುಡ್ಡು ತೆತ್ತು ಊಟ ಮಾಡುತ್ತಿದ್ದಾರೆ. ಇದರಿಂದ ತಾವು ದುಡಿದ ಹಣವೆಲ್ಲಾ ಊಟ ಮತ್ತು ಉಪಹಾರಕ್ಕೆ ವ್ಯಯವಾಗುತ್ತಿದೆ. ತಾಲೂಕು ಆಡಳಿತ ಆದಷ್ಟು ಬೇಗ ಇಂದಿರಾ ಕ್ಯಾಂಟೀನ್ ಆರಂಭಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕುಮಾರ್, ಕೂಲಿ ಕಾರ್ಮಿಕ.‘‘ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿ ಒಂದು ವಾರ ಕಳೆದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಲೆ ಕೆಡಿಸಿಕೊಳ್ಳದೇ ಬಡವರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ. ಕಡಿಮೆ ದರದ ಬದಲಿಗೆ ದುಬಾರಿ ಹಣ ಕೊಟ್ಟು ಖಾಸಗಿ ಹೋಟೆಲ್‌ಗಳನ್ನು ತುತ್ತಿನ ಚೀಲ ತುಂಬಿಸಿಕೊಳ್ಳುವಂತಾಗಿದೆ‘‘ಸವಿತಾ, ಮುಖ್ಯಾಧಿಕಾರಿ, ಪಪಂ, ಅರಕಲಗೂಡು.‘‘ಇಂದೀರಾ ಕ್ಯಾಂಟೀನ್ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರ ಬಾಗಿಲು ಬಂದ್ ಮಾಡಿದ್ದು ಪೋನ್ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ, ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ಕೂಡ ನೀಡಿಲ್ಲ. ಗುತ್ತಿಗೆದಾರನ ವರ್ತನೆ ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು.‘‘