ಅಮೆರಿಕಾದಲ್ಲಿ ಪತ್ನಿ, ಪುತ್ರನಿಗೆ ಗುಂಡಿಕ್ಕಿ ಹತ್ಯೆಗೈದು ತಾನೂ ಆತ್ಮಹತ್ಯೆಗೆ ಶರಣನಾದ ಮೈಸೂರಿನ ಉದ್ಯಮಿ

mysore
Published on

ಮೈಸೂರು: ಮೈಸೂರಿನ ಉದ್ಯಮಿ ಹರ್ಷ ಕಿಕ್ಕೇರಿ ಅಲಿಯಾಸ್ ಹರ್ಷವರ್ಧನ್(57) ಅವರು ಅಮೆರಿಕಾದಲ್ಲಿ ಪತ್ನಿ ಹಾಗೂ ಪುತ್ರನಿಗೆ ಗುಂಡಿಕ್ಕಿ ಹತ್ಯೆ ಮಾಡಿ, ತಾವೂ ಆತ್ಮಹತ್ಯೆಗೆ ಶರಣರಾಗಿದ್ದಾರೆ.

ಅಮೆರಿಕಾ ಕಾಲಮಾನದಲ್ಲಿ ಗುರುವಾರ ರಾತ್ರಿ ಈ ಘಟನೆ ಸಂಭವಿಸಿದ್ದು, ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.

ಹರ್ಷ ಅವರು ಪತ್ನಿ ಶ್ವೇತಾ, ಇಬ್ಬರು ಪುತ್ರರೊಂದಿಗೆ ಅಮೆರಿಕಾದ ನ್ಯೂ ಕ್ಯಾಸಲ್‌ನಲ್ಲಿ ವಾಸವಿದ್ದರು.

ಗುರುವಾರ ರಾತ್ರಿ ಹರ್ಷ, ಪತ್ನಿ ಹಾಗೂ ಹಿರಿಯ ಪುತ್ರನಿಗೆ ಗುಂಡಿಕ್ಕಿ, ನಂತರ ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆ ವೇಳೆ ಏಳು ವರ್ಷದ ಕಿರಿಯ ಪುತ್ರ ಮನೆಯಿಂದ ಹೊರಹೋಗಿದ್ದರಿಂದ ಅದೃಷ್ಟವಶಾತ್ ಬದುಕುಳಿದಿದ್ದಾನೆ ಎಂಬುದು ತಿಳಿದುಬಂದಿದೆ.

ಹರ್ಷ ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿಯವರು. ನಗರದ ಎಸ್‌ಜೆಸಿಇನಲ್ಲಿ ಇಂಜಿನಿಯರಿಂಗ್ ಪದವಿ ಪಡೆದ ನಂತರ ಅಮೆರಿಕಾದಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಉದ್ಯೋಗಿಯಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡುತ್ತಿದ್ದರು.

ಬಳಿಕ ಭಾರತಕ್ಕೆ ವಾಪಸಾದ ಅವರು ತಮ್ಮ ಪತ್ನಿ ಶ್ವೇತಾ ಅವರೊಂದಿಗೆ ಸೇರಿ 2018ರಲ್ಲಿ ‘ಹೋಲೋ ವರ್ಲ್ಡ್ ರೊಬೋಟಿಕ್’ ಸಂಸ್ಥೆ ಸ್ಥಾಪಿಸಿದ್ದರು.

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಈ ಕಂಪನಿಯ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯೂ ಸೃಷ್ಟಿಯಾಗಿತ್ತು. ನಗರದಲ್ಲಿ ನಡೆದ ಉದ್ಯಮಿಗಳ ಸಮಾವೇಶದಲ್ಲೂ ರೋಬೋಟಿಕ್ ತಂತ್ರಜ್ಞಾನದ ಬಗ್ಗೆ ಉಪನ್ಯಾಸ ನೀಡಿದ್ದರು.

ಮೈಸೂರು ವಿಜಯನಗರ 3ನೇ ಹಂತದ ನಿರ್ಮಿತಿ ಕೇಂದ್ರದ ರಸ್ತೆಯಲ್ಲಿ ‘ಹೋಲೋ ವರ್ಲ್ಡ್ ಕಂಪನಿಯ ಕಾರ್ಪೊರೇಟ್ ಕಚೇರಿಯಿದೆ. ಇಲ್ಲಿ ಸಂಸ್ಥೆಯನ್ನು ಸ್ಥಾಪಿಸಿದ ಬಳಿಕ ದಂಪತಿ ಅಮೆರಿಕಾಗೆ ವಾಪಸ್ ಹೋಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net