ಅಮಿತ್ ಷಾ ಹೇಳಿಕೆ ತಿರುಚಿ ಅಪಪ್ರಚಾರ: ರಾಜೀನಾಮೆ ಹೇಳಿಕೆ ವಾಪಸ್ ಪಡೆಯಲು ಅಮಿತ್ ಶೆಟ್ಟಿ ಆಗ್ರಹ

AMITHSHETTY-
Published on

ಹಾಸನ: ಕೇಂದ್ರದ ಗೃಹ ಮಂತ್ರಿ ಅಮಿತ್ ಷಾ ಅವರ ಹೇಳಿಕೆಯನ್ನು ತಿರುಚಿ ಅಪಪ್ರಚಾರ ಮಾಡಲಾಗುತ್ತಿದೆ. ಇದನ್ನು ನೆಪ ಮಾಡಿಕೊಂಡು ಸಂಸದ ಶ್ರೇಯಸ್ ಪಟೇಲ್ ಅವರು ಅಮಿತ್ ಷಾ ಅವರ ರಾಜೀನಾಮೆ ಕೇಳುವುದು ಸರಿಯಲ್ಲ. ಕೂಡಲೇ ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕೆಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ ಆಗ್ರಹಿಸಿದರು.

ಅಮಿತ್ ಷಾ ಅವರು ರಾಜಿನಾಮೆ ಕೊಡಬೇಕು ಎಂದು ಜಿಲ್ಲೆಯ ಸಂಸದರು ಹೇಳಿದ್ದಾರೆ. ಶ್ರೇಯಸ್ ಪಟೇಲ್ ಅವರು ತಮ್ಮ ಹೇಳಿಕೆಯನ್ನು ವಾಪಸ್ ತೆಗೆದುಕೊಳ್ಳಬೇಕು. ಕಾಂಗ್ರೆಸ್ ಪಕ್ಷವು ಎಷ್ಟು ಬಾರಿ ಸಂವಿಧಾನ ತಿದ್ದುಪಡಿ ಮಾಡಿದೆ. ಹಾಗೂ ಅಂಬೇಡ್ಕರ್ ವಿಚಾರದಲ್ಲಿ ಹೇಗೆಲ್ಲ ನಡೆದುಕೊಂಡಿದೆ ಎಂಬುದರ ಬಗ್ಗೆ ತಿಳಿದಿದೆ. ಕಾಂಗ್ರೆಸ್‌ನಿಂದ ನಾವು ಪಾಠ ಕಲಿಯಬೇಕಾಗಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು.

ಅಮಿತ್ ಷಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವ ಮಟ್ಟದ ನಾಯಕರು. ಅಮಿತ್ ಷಾ ಬಗ್ಗೆ ಮಾತನಾಡುವಾಗ ಅರಿವು ಇರಬೇಕು ಹಾಗೂ ನಾಲಿಗೆ ಮೇಲೆ ಬಿಗಿ ಇರಬೇಕು. ಕಾಂಗ್ರೆಸ್ ಸರ್ಕಾರದ ರಾಜ್ಯದಲ್ಲಿ ಕೇವಲ ಗ್ಯಾರಂಟಿಗಳನ್ನು ಮಾತ್ರ ಬಿಂಬಿಸಿ ಇತರೆ ಯಾವ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಎಲ್ಲ ಕಚೇರಿಯಲ್ಲಿ ಲಂಚದ ಮೂಲಕ ಕೆಲಸ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರು ಮುಡಾ ಹಗರಣ, ವಾಲ್ಮೀಕಿ ನಿಗಮ ಮಂಡಳಿ ಭಷ್ಟಾಚಾರ ಸೇರಿದಂತೆ ಹಲವು ಹಗರಣಗಳಲ್ಲಿ ಸಿಕ್ಕಿಕೊಂಡಿದ್ದಾರೆ ಎಂದು ಆರೋಪಿಸಿದರು.

ಅಂಬೇಡ್ಕರ್ ಬದುಕಿದ್ದಾಗ ಗೌರವಯುತವಾಗಿ ನಡೆಸಿಕೊಳ್ಳದ ಕಾಂಗ್ರೆಸ್ ಅವರನ್ನು ರಾಜಕೀಯವಾಗಿಯೂ ಹತ್ತಿಕ್ಕುವ ಕೆಲಸ ಮಾಡಿದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವರ ಕೊಡುಗೆಗಳನ್ನು ಸ್ಮರಿಸುವ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನವರು ಅಂಬೇಡ್ಕರ್ ಅವರಿಗೆ ಮಾಡಿದ ಅಪಮಾನದ ಬಗ್ಗೆ ತಿಳಿಸುವಾಗ ಅವರು ಹೇಳಿರುವ ಸಂಪೂರ್ಣ ಮಾತುಗಳ ಪೈಕಿ ಅರ್ಧ ಕತ್ತರಿಸಿ ಜನರಿಗೆ ತಪ್ಪು ಅಭಿಪ್ರಾಯ ಬರುವ ರೀತಿ ಮಾಡಿದ್ದಾರೆ. ಜನರು ಕಾಂಗ್ರೆಸ್ ಮಾತಿಗೆ ಕಿವಿ ಕೊಡಬಾರದು ಎಂದು ಕೋರಿದರು.

ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ರಾಜ್ಯ ರಾಜಕಾರಣದಲ್ಲೂ ಕೂಡ ಸಿ.ಟಿ. ರವಿ ಅವರ ಮೇಲೆ ಕಾಂಗ್ರೆಸ್ ನಾಯಕರ ದಬ್ಬಾಳಿಕೆ ಖಂಡನೀಯ. ಅವರ ಮೇಲೆ ಹಲ್ಲೆ ಮಾಡಿಸಿದ್ದಲ್ಲದೆ ಅವರನ್ನು ರಾತ್ರಿಯಿಡೀ ಸುತ್ತಾಡಿಸಿ ಬೆದರಿಕೆ ಹಾಕುವ ಕೆಲಸ ಮಾಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. ಜನಪ್ರತಿನಿಧಿಗಳ ಮೇಲೆಯೇ ಹೀಗಾದರೆ ಸಾಮಾನ್ಯ ಜನರ ಗತಿ ಏನು ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹಿಂದುಳಿದ ಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ್, ಸಂಘಟನಾ ಪರ್ವ ಜಿಲ್ಲಾ ಸಂಚಾಲಕ ಡಿ. ರಾಜ್ ಕುಮಾರ್, ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹರ್ಷಿತ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net