ಅಭಿವೃದ್ಧಿಗೆ ಸಿಗಲಿದೆಯಾ ಅನುದಾನ ?

05 KAMPLI 01A
Published on

ಕಂಪ್ಲಿ: ರಾಜ್ಯ ಸರ್ಕಾರ ಶುಕ್ರವಾರ ಮಂಡಿಸಲಿರುವ ಬಜೆಟ್‌ನತ್ತ ಕ್ಷೇತ್ರದ ಜನರು ದೃಷ್ಟಿ ನೆಟ್ಟಿದ್ದು, ಅಭಿವೃದ್ಧಿಗೆ ಅನುದಾನ ಸಿಗಲಿದೆಯಾ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

ಆರೇಳು ವರ್ಷಗಳಾದರೂ ಕಂಪ್ಲಿ ಪೂರ್ಣ ಪ್ರಮಾಣದ ತಾಲೂಕಾಗಿ ರೂಪುಗೊಳ್ಳದೇ, ನೆರೆ ಜಿಲ್ಲೆ ಹಾಗೂ ತಾಲೂಕುಗಳ ಆಡಳಿತ ಪರದೆಯಲ್ಲಿಯೇ ಇದ್ದು, ಪೂರ್ಣ ಪ್ರಮಾಣದ ತಾಲೂಕಿಗೆ ಒತ್ತು ನೀಡಬೇಕೆಂಬ ಆಗ್ರಹ ಸ್ಥಳೀಯರದ್ದಾಗಿದೆ. ಕಂಪ್ಲಿ ಮೂಲಕ ಗಂಗಾವತಿ-ದರೋಜಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ 919.49 ಕೋಟಿ ರೂ. ಕ್ರಿಯಾ ಯೋಜನೆ ಸಿದ್ಧಪಡಿಸಿದ್ದು, ರಾಜ್ಯ ಸರ್ಕಾರ ಬಜೆಟ್‌ನಲ್ಲಿ ತನ್ನ ಪಾಲಿನ ಹಣ ಮೀಸಲಿಡಬೇಕಿದೆ.

63 ವರ್ಷಗಳ ಹಳೆಯದಾದ ತುಂಗಭದ್ರಾ ನದಿ ಸೇತುವೆ ಶಿಥಿಲಗೊಂಡಿದ್ದು, ನೂತನ ಸೇತುವೆ ನಿರ್ಮಾಣಕ್ಕೆ ಹಣ ಬಿಡುಗಡೆಗೊಳಿಸಬೇಕಿದೆ. ಬಸ್ ಡಿಪೋಗೆ ಸ್ಥಳ ನಿರ್ಧಾರವಾಗುತ್ತಿದ್ದು, ಡಿಪೋ ಆರಂಭಕ್ಕೆ ಅನುದಾನ ಮೀಸಲಿಡಬೇಕಿದೆ. ಆಡಳಿತಸೌಧ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಪೂರ್ಣಗೊಳಿಸಲು ಇನ್ನೂ 5 ಕೋಟಿ ರೂ. ಅಗತ್ಯವಿದೆ. ಇದಲ್ಲದೇ ಪಟ್ಟಣದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ರೂಪುರೇಷೆ ದೊರೆಯಬೇಕಿದೆ.

ನಾನಾ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳ ಕಾರ್ಯಾರಂಭ ನನೆಗುದಿಗೆ ಬಿದ್ದಿದ್ದು, ಸರ್ಕಾರ ಗಂಭಿರವಾಗಿ ಪರಗಣಿಸಿ ಸಾರ್ವಜನಿಕರ ಅಲೆದಾಟವನ್ನು ತಪ್ಪಿಸಬೇಕಿದೆ. ಬಿಇಒ ಕಚೇರಿ ಸ್ವಂತ ಕಟ್ಟಡ, ಪಶು ವೈದ್ಯಕೀಯ ಕಾಲೇಜು, ಮೆಣಸಿನಕಾಯಿ ಬೆಳೆಗಾರರ ಹಿತರಕ್ಷಣೆಗಾಗಿ ಕೋಲ್ಡ್ ಸ್ಟೋರೇಜ್, ಸಮಗ್ರ ಕೀಟ ನಿರ್ವಹಣೆ ಪ್ರಯೋಗಾಲಯ ಸ್ಥಾಪನೆಗೊಳ್ಳಬೇಕಿದೆ. ಈ ಭಾಗದ ಕುಡಿವ ನೀರಿನ ಮೂಲವಾದ ತುಂಗಭದ್ರಾ ನದಿ ಶುದ್ಧತೆ ಕಾಪಾಡಲು ವಿಶೇಷ ಯೋಜನೆ ಆರಂಭಿಸಬೇಕೆಂಬುದು ಜನ ಸಾಮಾನ್ಯರ ಧ್ವನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net