

ಕಡೂರು: ನೀರು ಅತಿಯಾದ ಬಳಕೆಯಿಂದ ಅಂತರ್ಜಲ ಮಟ್ಟ ಕಡಿಮೆಯಾಗಿ ಜಲಕ್ಷಾಮ ಉಂಟಾಗುತ್ತಿರುವ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅಂತರ್ಜಲ ನಿರ್ವಹಣೆ ಅತ್ಯಂತ ಪ್ರಮುಖವಾಗಿದೆ. ನೀರಿನ ಪ್ರಮಾಣ ಕಡಿಮೆಯಾಗದಂತೆ ಎಚ್ಚರಿಕೆಯಿಂದ ಬಳಸಿ ಉಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಅಟಲ್ ಭೂಜಲ ಯೋಜನೆ ರಾಜ್ಯ ಕಾರ್ಯಕ್ರಮ ನಿರ್ವಹಣಾ ಘಟಕದ ಸಾಮಾಜಿಕ ಅಭಿವೃದ್ಧಿ ತಜ್ಞ ಎಸ್. ಪ್ರವೀಣ್ ತಿಳಿಸಿದರು.
ಎಪಿಎಂಸಿ ಆವರಣದಲ್ಲಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಅಟಲ್ ಭೂಜಲ ಯೋಜನೆಯಲ್ಲಿ ತಾಲೂಕಿನ ರೈತರಿಗೆ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, 2017ರಲ್ಲಿ ಭಾರತ ಸರ್ಕಾರ ನಡೆಸಿರುವ ಅಂತರ್ಜಲ ಸಮೀಕ್ಷೆ ಪ್ರಕಾರ ರಾಜ್ಯದ 41 ತಾಲೂಕುಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿಯೂ ಅಂತರ್ಜಲ ಅತಿಯಾಗಿ ಬಳಕೆಯಾಗಿರುವುದು ಕಂಡುಬಂದಿದೆ. ಇಂಥ ಅಪಾಯಕಾರಿ ಪರಿಸ್ಥಿತಿ ತಡೆಯಲು ಕೇಂದ್ರ ಸರ್ಕಾರ ವಿಶ್ವ ಬ್ಯಾಂಕ್ ನೆರವಿನೊಂದಿಗೆ ಅಟಲ್ ಭೂಜಲ ಯೋಜನೆ ಜಾರಿಗೊಳಿಸಿದೆ ಎಂದರು.
ಸಮುದಾಯ ಸಹಭಾಗಿತ್ವದೊಂದಿಗೆ ಅಂತರ್ಜಲ ಸುಸ್ಥಿರವಾಗಿ ನಿರ್ವಹಣೆ ಮಾಡುವುದು, ಕೃಷಿಯಲ್ಲಿ ನೀರಿನ ಮಿತ ಬಳಕೆ ಉಪಕ್ರಮಗಳನ್ನು ಉತ್ತೇಜಿಸುವುದು, ಮಳೆನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯುವ, ನೀರಿನ ಸಂರಕ್ಷಣೆ ಮತ್ತು ಮರುಪೂರಣ ಕ್ರಮಗಳನ್ನು ಕೈಗೊಳ್ಳುವುದು, ಸಮುದಾಯಕ್ಕೆ ಅಂತರ್ಜಲದ ಮಹತ್ವದ ಕುರಿತು ಅರಿವು ಮೂಡಿಸುವುದು, ಈ ಮೂಲಕ ಅಂತರ್ಜಲವನ್ನು ಸುಸ್ಥಿರವಾಗಿ ನಿರ್ವಹಣೆ ಮಾಡುವುದು ಅಟಲ್ ಭೂಜಲ ಯೋಜನೆಯ ಪ್ರಮುಖ ಉದ್ದೇಶ ಎಂದು ಹೇಳಿದರು.
ನೆಟಾಫಿಮ್ ಸಂಸ್ಥೆ ಸಂಯೋಜಕ ಉಮೇಶ್ ಮಾತನಾಡಿ, ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಸದ್ಬಳಕೆಗಾಗಿ ರೈತರು ಹನಿ ನೀರಾವರಿ, ತುಂತುರು ನೀರಾವರಿ ಹಾಗೂ ಭೂ ಹೊದಿಕೆಯಂತಹ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಕೃಷಿ ವಿಜ್ಞಾನಿ ಸೋಮಶೇಖರ್ ಮಾತನಾಡಿ, ಮಿತಿಮೀರಿದ ಬಳಕೆಯಿಂದಾಗಿ ಅಂತರ್ಜಲ ಅಪಾಯಕಾರಿ ಪರಿಸ್ಥಿತಿ ತಲುಪಿದೆ. ಆದ್ದರಿಂದ ರೈತರು ಹೆಚ್ಚು ನೀರು ಬಳಕೆಯಾಗುವ ಬೆಳೆಗಳಿಗೆ ಬದಲಾಗಿ ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಂದ ರೈತರು ಹಾಗೂ ಮಹಿಳೆಯರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಕೃಷಿ ಕೇಂದ್ರದ ಸಹಾಯಕ ನಿರ್ದೇಶಕಿ ಉಷಾ, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಅಶೋಕ್, ಕೃಷಿ ಅಧಿಕಾರಿ ಕರಿಯಪ್ಪ, ಅಟಲ್ ಭೂಜಲ ಯೋಜನೆ ನೋಡಲ್ ಅಧಿಕಾರಿ ನಂದಿನಿ, ಜಿಲ್ಲಾ ಕಾರ್ಯಕ್ರಮ ನಿರ್ವಹಣಾ ಘಟಕದ ತಜ್ಞರು ಇದ್ದರು.