ಅಚ್ಛೇದಿನ್ ಅಲ್ಲ, ಬುರಾದಿನ್! ; ತೈಲಬೆಲೆ ಹೆಚ್ಚಳ ವಿರೋಧಿಸಿ ಹೆಬ್ಬೂರಲ್ಲಿ ಪ್ರತಿಭಟನೆ ;  ಗೌರಿಶಂಕರ್ ಲೇವಡಿ

WhatsApp Image 2021-03-09 at 4.33.47 PM
Published on

ತುಮಕೂರು : ಕೇಂದ್ರ ಸರ್ಕಾರ ನಿರಂತರವಾಗಿ ಗ್ಯಾಸ್, ತೈಲ ಬೆಲೆ ಹೆಚ್ಚಳ ಮಾಡುವ ಮೂಲಕ ಜನ ಸಾಮಾನ್ಯರ ಜೀವನದ ಮೇಲೆ ಗದಾಪ್ರಹಾರ ಮಾಡುತ್ತಿದೆ. ಈಗ ಇರುವುದು ಅಚ್ಛೇದಿನ್ ಅಲ್ಲ ಬುರಾದಿನ್(ಕೆಟ್ಟದಿನ) ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಲೇವಡಿ ಮಾಡಿದರು.

ಹೆಬ್ಬೂರಿನಲ್ಲಿ ತೈಲ ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ಘಟಕದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವವಹಿಸಿದ್ದ ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಹಣದ ಹೊಳೆ ಹರಿಸಲು ಬಿಜೆಪಿ ಜನರನ್ನು ಈ ರೀತಿ ಲೂಟಿ ಮಾಡುತ್ತಿದೆ ಎಂದರು.

ಅಚ್ಛೇದಿನ್ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದು ಜನರನ್ನು ಲೂಟಿ ಮಾಡುವುದರಲ್ಲಿ ಮೋದಿ ಸರ್ಕಾರ ತಲ್ಲೀನವಾಗಿದೆ. ಗ್ಯಾಸ್, ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಜನರಿಗೆ ಭರವಸೆ ಕೊಟ್ಟ ಎಂದ ಅಚ್ಛೇದಿನ್ ಇದೇನಾ ಎಂದು ಪ್ರಶ್ನಿಸಿದರು.

ಉಗ್ರ ಪ್ರತಿಭಟನೆ: ಬಿಎಸ್‌ವೈ ವಿರೋಧ ಪಕ್ಷದ ಮುಖಂಡರಾಗಿದ್ದಾಗ ಎಚ್‌ಡಿಕೆ ಅವರನ್ನು ಉತ್ತರ ಕರ್ನಾಟಕಕ್ಕೆ ಯಾವುದೇ ಕೊಡುಗೆ ನೀಡಿಲ್ಲ ಎಂದು ಹೇಳಿದ್ದರು. ಈ ಬಾರಿ ಬಜೆಟ್‌ನಲ್ಲಿ ಹಳೇ ಮೈಸೂರು ಭಾಗಕ್ಕೆ ಬಿಎಸ್‌ವೈ ಕೊಡುಗೆ ಏನು? ತುಮಕೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆ ನಿಲ್ಲಿಸಿರುವ ಬಗ್ಗೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಗೌರಿಶಂಕರ್ ಎಚ್ಚರಿಸಿದರು.  ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ರವಾನಿಸಲಾಯಿತು.

ತಾಪಂ ಸದಸ್ಯ ದೀಪು, ಸಿರವರ ರಂಗಸ್ವಾಮಿ, ಜೆಡಿಎಸ್ ಮುಖಂಡರಾದ ನರುಗನಹಳ್ಳಿ ವಿಜಯಕುಮಾರ್, ಕೆ.ವಿ.ರಾಜು, ಗ್ರಾಪಂ ಮಾಜಿ ಸದಸ್ಯರಾದ ರಾಘವೇಂದ್ರ, ಕೇಶವ, ಲಾಟರಿ ನಾರಾಯಣಪ್ಪ, ಹೆಗ್ಗೆರೆ ಆಜಂ, ತಾಪಂ ಮಾಜಿ ಸದಸ್ಯ ಗೋವಿಂದಪ್ಪ, ಕಂಬಾಳಪುರ ಪಾಂಡು, ರಾಜು ಬಳಗೆರೆ, ಗೌರಮ್ಮ, ಪುಷ್ಪಾಲತಾ ಇದ್ದರು.

ಉಪ್ಪು,ಹುಳಿ, ಕಾರವಿಲ್ಲದ ಬಜೆಟ್!: ಸಿಎಂ ಯಡಿಯೂರಪ್ಪ ಮಂಡಿಸಿರುವ ಬಜೆಟ್ ಉಪ್ಪು, ಹುಳಿ, ಕಾರವಿಲ್ಲದ ಸಪ್ಪೆ ಬಜೆಟ್. ಇದರಲ್ಲಿ ಜಿಲ್ಲೆಗೆ ಯಾವುದೇ ಕೊಡುಗೆ ನೀಡಿಲ್ಲ. ಶ್ರೀಶಿವಕುಮಾರಸ್ವಾಮೀಜಿ ಹೆಸರಿನಲ್ಲಿ ಸ್ಮತಿವನ ನಿರ್ಮಾಣಕ್ಕೆ 2 ಕೋಟಿ ಅನುದಾ ನೀಡಿರುವುದನ್ನು ಬಿಟ್ಟರೆ, ಹಳೇ ಮೈಸೂರು ಭಾಗದ ರೈತರಿಗೆ ಯಾವುದೇ ಯೋಜನೆ ಘೋಷಿಸಿಲ್ಲ. ಜಿಲ್ಲೆಗೆ ಆಗಿರುವ ಘೋರ ಅನ್ಯಾಯದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಗೌರಿಶಂಕರ್ ಹರಿಹಾಯ್ದರು.

ಜನತಾ ದರ್ಶನ: ಪ್ರತಿಭಟನೆ ಬಳಿಕ ಹೆಬ್ಬೂರಿನ ನಾಡಕಚೇರಿ ಎದುರಿನ ರೇಷ್ಮೆ ಇಲಾಖೆ ಆವರಣದಲ್ಲಿ ಗೌರಿಶಂಕರ್ ಜನತಾದರ್ಶನ ನಡೆಸಿದರು. 80ಕ್ಕೂ ಹೆಚ್ಚು ಮಂದಿಗೆ ಸ್ಥಳದಲ್ಲಿ ವಿವಿಧ ಪಿಂಚಣಿ ಯೋಜನೆಗಳ ಮಂಜೂರಾತಿ ಪ್ರಮಾಣಪತ್ರ ವಿತರಿಸಲಾಯಿತು. ಜನತಾ ದರ್ಶನದಲ್ಲಿ ತಹಸೀಲ್ದಾರ್ ಜಿ.ವಿ.ಮೋಹನ್‌ಕುಮಾರ್, ತಾಪಂ ಇಒ ಜೈಪಾಲ್, ಕಂದಾಯ ನಿರೀಕ್ಷಕರು, ಗ್ರಾಮ ಲೆಕ್ಕಿಗರು ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net