ಅಂಗನವಾಡಿ ಮಕ್ಕಳಿಗೆ ಉಚಿತ ಆಧಾರ್ ಕಾರ್ಡ್

15-FEB-GPT-1
Published on

ಗುಂಡ್ಲುಪೇಟೆ: ಪಟ್ಟಣದ ಶ್ರೀ ಶಕ್ತಿ ಭವನದಲ್ಲಿ ಬದುಕು ಸ್ವಯಂ ಸೇವಾ ಸಂಸ್ಥೆಯ ವತಿಯಿಂದ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಉಚಿತವಾಗಿ ಆಧಾರ್ ನೋಂದಣಿ ಮಾಡಲಾಯಿತು.

ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಹೇಮಾವತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದು ಹುಟ್ಟಿದ ಪ್ರತಿ ಮಗುವಿಗೂ ಜನನ ಪ್ರಮಾಣ ಪತ್ರ ಹಾಗೂ ಶಾಲೆಗೆ ಹೋಗುತ್ತಿದ್ದಂತೆ ಆಧಾರ್ ಕಾರ್ಡ್ ಅತ್ಯಗತ್ಯವಾಗಿದೆ. ಆಧಾರ್ ನೋಂದಣಿ ಮಾಡಿಸಲು ಪಾಲಕರು ತುಂಬಾ ಪರದಾಡುವಂತಾಗಿದ್ದು, ಸ್ವಯಂಸೇವಾ ಸಂಸ್ಥೆಯು ಉಚಿತವಾಗಿ 224 ಮಕ್ಕಳಿಗೆ ನೋಂದಣಿ ಮಾಡಿಸುವ ಮೂಲಕ ನೆರವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸ್ಥೆಯ ಗೌರವಾಧ್ಯಕ್ಷ ಜಿ.ಕೆ.ನಾಗರಾಜು ಮಾತನಾಡಿ, ತಾಲೂಕಿನಂತೆ ಸುಮಾರು ಒಂದು ವರ್ಷದಿಂದ ಐದು ವರ್ಷದ ಒಳಗಿನ 2,100 ಮಕ್ಕಳಿದ್ದು ಎಲ್ಲ ಮಕ್ಕಳಿಗೂ ಕೂಡ ಬಾಲ ಆಧಾರ ಮಾಡಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಮುಂದಿನ ದಿನಗಳಲ್ಲಿ ಎಲ್ಲ ಗ್ರಾಮ ಮಟ್ಟದಲ್ಲಿ ಬಾಲ ಆಧಾರ್ ಶಿಬಿರವನ್ನು ಈಗಾಗಲೇ ನಡೆಸಿದ್ದು, ಎಲ್ಲ ಮಕ್ಕಳಿಗೂ ಇದರ ಸೌಲಭ್ಯವನ್ನು ಕಲ್ಪಿಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಸಂತೋಷ, ಸಂಘಟನಾ ಕಾರ್ಯದರ್ಶಿ ರಮೇಶ್, ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್‌ನ ಗಿರೀಶ್, ಅಂಚೆ ಕಚೇರಿಯ ಸುಬ್ಬಣ್ಣ, ಪ್ರವೀಣ್, ಮಧುಮಿತಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಪಾಲಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net