More

    805 ಹೆಕ್ಟೇರ್‌ನಲ್ಲಿ ಕಲ್ಲಂಗಡಿ ಕೃಷಿ

    -ಪುರುಷೋತ್ತಮ ಪೆರ್ಲ ಕಾಸರಗೋಡು

    ಒಂದೆಡೆ ಬಿಸಿಲಿನ ಧಗೆ ಏರುತ್ತಿದ್ದು, ಹಣ್ಣುಗಳಿಗೆ ಬೇಡಿಕೆ ಹೆಚ್ಚಾಗತೊಡಗಿದೆ. ಜಿಲ್ಲೆಯಲ್ಲಿ ಕಲ್ಲಂಗಡಿ ಹಣ್ಣಿಗೆ ವ್ಯಾಪಕ ಬೇಡಿಕೆಯಿದ್ದು, ಧಾರಣೆಯಲ್ಲೂ ಏರಿಕೆಯುಂಟಾಗಿದೆ. ವರ್ಷದ ಹಿಂದೆ ಕಿಲೋ ಒಂದಕ್ಕೆ 10 ರೂ. ಅಂಚಿನಲ್ಲಿದ್ದ ಕಲ್ಲಂಗಡಿ ಬೆಲೆ ಇಂದು ಕಿಲೋಗೆ 25ರಿಂದ 30 ರೂ. ಅಂಚಿಗೆ ತಲುಪಿದೆ.

    ಜಿಲ್ಲೆಯಲ್ಲಿ ಕುಟುಂಬಶ್ರೀ ಮೂಲಕ ಮನೆಗಳಲ್ಲಿ 805 ಹೆಕ್ಟೇರ್ ವಿಸ್ತೀರ್ಣದಲ್ಲಿ ಎಡಿಎಸ್‌ನ ಮಾದರಿ ಪ್ಲಾಟ್‌ಗಳನ್ವಯ 134 ಹೆಕ್ಟೇರ್ ಮತ್ತು ಸಿಡಿಎಸ್ ಮಾದರಿಯ ಪ್ಲಾಟ್‌ಗಳ ಮೂಲಕ 96 ಎಕರೆ ಪ್ರದೇಶದಲ್ಲೂ ಕಲ್ಲಂಗಡಿ ಕೃಷಿ ನಡೆಸಲಾಗುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಜಿಲ್ಲಾ ಮಿಷನ್ ನೇತೃತ್ವದಲ್ಲಿ 200 ಎಕರೆ ಪ್ರದೇಶದಲ್ಲಿ ಕಲ್ಲಂಗಡಿ ಕೃಷಿ ಬೆಳೆಸಿರುವುದಾಗಿ ಕುಟುಂಬಶ್ರೀ ಲೆಕ್ಕಾಚಾರ ತಿಳಿಸಿದೆ.

    ಉರಿ ಬಿಸಿಲಿಗೆ ಹೊಟ್ಟೆತಣಿಸುವ ಹಣ್ಣುಗಳಲ್ಲಿ ಕಲ್ಲಂಗಡಿಗೆ ಹೆಚ್ಚಿನ ಪ್ರಾಧಾನ್ಯತೆಯಿದೆ. ನೀರಿನಂಶ ಹೆಚ್ಚಿರುವುದರಿಂದ ಕಲ್ಲಂಗಡಿ ಹಣ್ಣಿಗೆ ಬೇಸಿಗೆಯಲ್ಲಿ ಹೆಚ್ಚಿನ ಬೇಡಿಕೆ ಉಂಟಾಗುತ್ತಿದೆ. ಕಲ್ಲಂಗಡಿಯಲ್ಲಿ ದೇಹಕ್ಕೆ ಅಗತ್ಯ ಶಕ್ತಿ ನೀಡುವ ಹಲವು ವಿಟಮಿನ್‌ಗಳಿದ್ದು, ವಿವಿಧ ಔಷಧೀಯ ಗುಣವನ್ನೂ ಹೊಂದಿದೆ. ಕಲ್ಲಂಗಡಿಯಲ್ಲಿ ಯಾವುದೂ ವೇಸ್ಟ್ ಇಲ್ಲ. ಹೊರಗಿನ ಸಿಪ್ಪೆಯನ್ನು ಪಲ್ಯ, ಸಾಂಬಾರ್‌ಗೂ ಬಳಸುತ್ತಾರೆ.

    ಕಲ್ಲಂಗಡಿ ಒಳಗಿನ ಹಣ್ಣು ಗಾಢ ಬಣ್ಣ ಪಡೆದುಕೊಳ್ಳಲು ಹಾಗೂ ಸಿಹಿ ಹೆಚ್ಚಾಗಲು ಮಾರಕ ಸಿರಪ್ ಇಂಜೆಕ್ಟ್ ಮಾಡುತ್ತಿರುವ ಬಗ್ಗೆಯೂ ದೂರು ಕೇಳಿಬರುತ್ತಿದೆ. ಇದು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು ಎಂಬುದನ್ನು ಆಹಾರ ತಪಾಸಣಾ ಅಧಿಕಾರಿಗಳೂ ಪತ್ತೆ ಹಚ್ಚಿದ್ದಾರೆ.

    ಹಸಿರು ಕುಟುಂಬಶ್ರೀ

    ಕುಟುಂಬಶ್ರೀಯ ಕಾಸರಗೋಡು ಜಿಲ್ಲಾ ಮಟ್ಟದ ಮಾದರಿ ಪ್ಲಾಟ್ ಯೋಜನೆಯನ್ವಯ ಕಲ್ಲಂಗಡಿ ಕೃಷಿ ನಡೆಸುತ್ತಿದೆ. ನಿಖರ ಕೃಷಿ ಪದ್ಧತಿಯನ್ವಯ ಕೃಷಿ ನಡೆಸಲಾಗುತ್ತಿದೆ. ಚೆಂಗಳ ಗ್ರಾಪಂಯ ಬೇವಿಂಜ ಪಾಂಡಿ ಬಯಲಿನ 5 ಎಕರೆ ವಿಸ್ತೀರ್ಣದಲ್ಲಿ ‘ಹಸಿರು ಕುಟುಂಬಶ್ರೀ’ಯ ಜೆಎಲ್‌ಜಿ ಘಟಕ ವತಿಯಿಂದ ಕಲ್ಲಂಗಡಿ ಕೃಷಿ ನಡೆಸಲಾಗುತ್ತಿದೆ. ಈಗಾಗಲೇ ಮುಳಿಯಾರು ಪಂಚಾಯಿತಿ ಸಿಡಿಎಸ್‌ನ ತ್ರಿವೇಣಿ ಜೆಎಲ್‌ಜಿ ಗುಂಪು ನಡೆಸಿದ ಕಲ್ಲಂಗಡಿ ಕೃಷಿ ಕಟಾವಿಗೆ ಸಿದ್ಧಗೊಂಡಿದೆ.

    ಮುಂದಿನ ಆರ್ಥಿಕ ವರ್ಷದಲ್ಲಿ ಜಿಲ್ಲಾ ಮಿಷನ್ 400 ಜೆಎಲ್‌ಜಿಗಳ ನೇತೃತ್ವದಲ್ಲಿ ನಿಖರ ಕೃಷಿ ಪದ್ಧತಿಯನ್ವಯ ಕಲ್ಲಂಗಡಿ ಕೃಷಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕಾಗಿ ಕುಟುಂಬಶ್ರೀ ಸದಸ್ಯರಿಗೆ ಹೈಟೆಕ್ ಕೃಷಿ ಕುರಿತು ವಿಶೇಷ ತರಬೇತಿ ನೀಡಲಾಗುವುದು. ಈ ಬಾರಿ ಕುಟುಂಬಶ್ರೀ ವತಿಯಿಂದ ನಡೆಸಲಾದ ಕಲ್ಲಂಗಡಿ ಕೃಷಿಯಲ್ಲಿ ಉತ್ತಮ ಇಳುವರಿ ಲಭ್ಯವಾಗಿದೆ.
    -ಟಿ.ಟಿ.ಸುರೇಂದ್ರನ್, ಜಿಲ್ಲಾ ಸಂಯೋಜಕ
    ಕುಟುಂಬಶ್ರೀ, ಕಾಸರಗೋಡು ಜಿಲ್ಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts