More

    ಎರಡನೇ ಡೋಸ್ ಆದ್ಯತೆ ಮೇರೆಗೆ ನೀಡಿ

    ವಿಜಯಪುರ: ಕರೊನಾ ಎರಡನೇ ಅಲೆ ತೀವ್ರವಾಗಿ ಹಬ್ಬುತ್ತಿದ್ದು, ಈವರೆಗೆ ಕೋವಿಶಿಲ್ಡ್, ಕೋವ್ಯಾಕ್ಸಿನ್ ಮೊದಲ ಡೋಸ್ ಪಡೆದವರಿಗೆ ಎರಡನೆಯ ಡೋಸ್ ಆದ್ಯತೆ ಮೇರೆಗೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಸೂಚಿಸಿದರು.

    ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಕರೊನಾ ನಿಯಂತ್ರಣ ಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮುಂದಿನ ದಿನಗಳಲ್ಲಿ ಕರೊನಾ ಮೂರನೇ ಅಲೆಯ ಭಯವಿದ್ದು, ಕಾರಣ ಈ ಹಿಂದೆ ಮೊದಲ ಡೋಸ್ ಪಡೆದವರಿಗೆ ಕ್ಷೇತ್ರವಾರು ಆದ್ಯತೆ ಮೇಲೆ ಎರಡನೇ ಡೋಸ್ ನೀಡಬೇಕು. ಬೇಡಿಕೆಯ ಬಗ್ಗೆ ತಕ್ಷಣ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿದರು.

    ಜಿಲ್ಲೆಯಲ್ಲಿ ಕರೊನಾ ಆಸ್ಪತ್ರೆಗಳಲ್ಲಿ ದಾಖಲಾಗಿ ಮೃತ ಪಟ್ಟಿರುವ ಪಾಲಕರ ಮಗುವನ್ನು ಗುರುತಿಸುವ ಕಾರ್ಯ ಮಾಡಬೇಕು. ತಾಯಿ ಹಾಗೂ ತಂದೆಗಳನ್ನು ಕಳೆದುಕೊಂಡಿರುವ ಮಗುವಿನ ಜೀವನಕ್ಕೆ ನೆರವಾಗಬೇಕು. ಅವರ ಪುನರ್ವಸತಿಗೆ ನೆರವಾಗಬೇಕು. ಅದರಂತೆ ಅಂತಹ ಮಗುವನ್ನು ತಕ್ಷಣ ಕರೊನಾ ಕಾಳಜಿ ಕೇಂದ್ರಗಳಿಗೆ ದಾಖಲು ಮಾಡಿಕೊಂಡು ಮುಂದಿನ ಪ್ರಕ್ರಿಯೆಗಳನ್ನು ನಡೆಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

    ಅದರಂತೆ ಇಂತಹ ಪಾಲಕರನ್ನು ಕಳೆದುಕೊಂಡು ನಿರ್ಗತಿಕರಾಗಿರುವ ಮಗು ಇದ್ದಲ್ಲಿ ಈ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ಕೂಡ ಟೋಲ್ ಫ್ರೀ ನಂಬರ್ 1098 ಹಾಗೂ 14499 ಕರೆ ಮಾಡಿ ಮಾಹಿತಿ ಒದಗಿಸಬಹುದಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ತಾಲೂಕು ಆಡಳಿತ ಮತ್ತು ಆರ್‌ಡಿಪಿಆರ್ ಇಲಾಖೆಗಳು ಸಮನ್ವಯತೆ ಸಾಧಿಸಿಕೊಂಡು ಇಂತಹ ನಿರ್ಗತಿಕ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕವಾಗಿ ಕೇರ್‌ಸೆಂಟರ್‌ಗಳನ್ನು ಆರಂಭಿಸಲು ಕ್ರಮ ಕೈಗೊಳ್ಳಲು ಅವರು ಸಲಹೆ ನೀಡಿದರು.

    ನಗರದ ಆಯುಷ್ ಆಸ್ಪತ್ರೆಯನ್ನು ಕರೊನಾ ಹೊರತಾದ ರೋಗಿಗಳ ಆಸ್ಪತ್ರೆಯಾಗಿ ಪರಿವರ್ತಿಸುವ ಬಗ್ಗೆ ಚಿಂತನೆ ಇದ್ದು, ಅಲ್ಲಿ ಬೆಡ್, ಸಿಬ್ಬಂದಿ ಮತ್ತು ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದ ಅವರು, ವಿಜಯಪುರ ನಗರದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಥಮ ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು ಈ ಆಸ್ಪತ್ರೆಯನ್ನು ಕರೊನಾ ಆಸ್ಪತ್ರೆಯಾಗಿ ಪರಿವರ್ತಿಸುವ ಬಗ್ಗೆ ವೈದ್ಯಕೀಯ ಸಚಿವರ ಗಮನಕ್ಕೂ ತರುವುದಾಗಿ ಹೇಳಿದರು.

    ನಗರದಲ್ಲಿ ಈಗಾಗಲೇ ಎರಡು ವಸತಿ ನಿಲಯಗಳನ್ನು ಕರೊನಾ ಕಾಳಜಿ ಕೇಂದ್ರವಾಗಿ ಪರಿವರ್ತಿಸಲಾಗಿದೆ. ರೋಗಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳುವಂತೆ ತಿಳಿಸಿದ ಅವರು ವಿಜಯಪುರ, ಮುದ್ದೇಬಿಹಾಳ ಹಾಗೂ ಬಸವನಬಾಗೇವಾಡಿಗಳಿಗೆ ಆಕ್ಸಿಜನ್ ಪ್ಲಾಂಟ್ ಮಂಜೂರಾಗಿದ್ದು ಇದರಿಂದ ಅತ್ಯುತ್ತಮ ತಾಂತ್ರಿಕತೆಯ ಆಕ್ಸಿಜನ್ ಸೌಲಭ್ಯ ದೊರೆಯಲಿದೆ. ಮುಂದಿನ ಒಂದು ತಿಂಗಳಲ್ಲಿ ಇದರ ಕಾರ್ಯರಂಭದ ಸಾಧ್ಯತೆ ಇದೆ ಎಂದರು.

    ಇದರಿಂದ ಮುಂಬರುವ ಒಂದು ತಿಂಗಳಲ್ಲಿ ಪ್ಲಾಂಟಿನಿಂದ ಆಕ್ಸಿಜನ್ ಸೌಲಭ್ಯ ದೊರೆಯುವ ಆಶಾಭಾವನೆ ವ್ಯಕ್ತಪಡಿಸಿದ ಅವರು ಜಿಲ್ಲೆಯ ಜನರೊಂದಿಗೆ ಮತ್ತು ಅವರ ಸಂಕಷ್ಟದ ಸ್ಥಿತಿಯಲ್ಲಿ ನಾವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಜೊತೆಗೆ ಸದಾ ಇರಲಿದ್ದು, ಯಾವುದೇ ಪರಿಸ್ಥಿತಿಯಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳದಂತೆ ಸಭೆಯ ಮೂಲಕ ಜನತೆಯಲ್ಲಿ ಮನವಿ ಮಾಡಿದರು.

    ಕರೊನಾದಿಂದ ಪಾಲಕರನ್ನು ಕಳೆದುಕೊಳ್ಳುವ ನಗರ ಮತ್ತು ಗ್ರಾಮಾಂತರ ಪ್ರದೇಶದ ಪ್ರತಿ ಮಗುವನ್ನು ಗುರುತಿಸಬೇಕು ಮಹಿಳಾ ಮತ್ತು ಮಕ್ಕಳ ಇಲಾಖೆ ವ್ಯಾಪ್ತಿಗೆ ಇದನ್ನು ತರುವ ದೆಸೆಯಲ್ಲಿ ಓರ್ವ ರಾಜ್ಯಮಟ್ಟದಲ್ಲಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾಮಟ್ಟದಲ್ಲಿ ತಲಾ ಒಬ್ಬರು ನೋಡಲ್ ಅಧಿಕಾರಿಗಳು ಇದ್ದಾರೆ ಎಂದು ಹೇಳಿದ ಸಚಿವರು ಇಂತಹ ಮಕ್ಕಳ ಬಗ್ಗೆ ಗಮನಕ್ಕೆ ತರುವಂತೆ ತಿಳಿಸಿದರು.
    ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಮಾತನಾಡಿ, ನಗರದಲ್ಲಿ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಶೇಕಡಾವಾರು ಇನ್ನಷ್ಟು ಪ್ರಗತಿ ಸಾಧಿಸಬೇಕು ಎಂದರು.

    ಸಭೆಯಲ್ಲಿ ವಿಧಾನಪರಿಷತ್ ಸದಸ್ಯ ಅರುಣ ಶಹಾಪೂರ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಜಿಪಂ ಸಿಇಓ ಗೋವಿಂದ ರೆಡ್ಡಿ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಡಿಎಚ್‌ಒ ಮಹೇಂದ್ರ ಕಾಪ್ಸೆ, ಉಪವಿಭಾಗಾಧಿಕಾರಿ ಬಲರಾಮ ಲಮಾಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts