More

    ಟ್ರೈಲ್‌ಬ್ಲೇಜರ್ಸ್‌ ಎದುರು ಹೀನಾಯವಾಗಿ ಶರಣಾದ ಮಿಥಾಲಿ ರಾಜ್ ಬಳಗ

    ಶಾರ್ಜಾ: ಟ್ರೈಲ್‌ಬ್ಲೇಜರ್ಸ್‌ ಬೌಲರ್‌ಗಳ ಎದುರು ಸಂಪೂರ್ಣ ಮಂಕಾದ ಮಿಥಾಲಿ ರಾಜ್ ಸಾರಥ್ಯ ವೆಲಾಸಿಟಿ ತಂಡ ಮಹಿಳಾ ಟಿ20 ಚಾಲೆಂಜ್ ಕ್ರಿಕೆಟ್ ಟೂರ್ನಿಯ ತನ್ನ 2ನೇ ಪಂದ್ಯದಲ್ಲಿ ಟ್ರೈಲ್ ಬ್ಲೇಜರ್ಸ್‌ ತಂಡದ ಎದುರು ಹೀನಾಯ ಸೋಲು ಕಂಡಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ವೆಲಾಸಿಟಿ ತಂಡ 9 ವಿಕೆಟ್‌ಗಳಿಂದ ಸ್ಮತಿ ಮಂದನಾ ಸಾರಥ್ಯದ ತಂಡಕ್ಕೆ ಶರಣಾಯಿತು. ಲೀಗ್‌ನ ಮೊದಲ ಪಂದ್ಯದಲ್ಲಿ ಸೂಪರ್‌ನೋವಾಸ್ ತಂಡದ ಎದುರು ರೋಚಕ ಜಯ ದಾಖಲಿಸಿ ಶುಭಾರಂಭ ಕಂಡಿದ್ದ ವೆಲಾಸಿಟಿ 2ನೇ ಪಂದ್ಯದಲ್ಲಿ ಮುಗ್ಗರಿಸಿತು. ಶುಕ್ರವಾರ ನಡೆಯಲಿರುವ ಲೀಗ್ ಹಂತದ ಕಡೇ ಪಂದ್ಯದಲ್ಲಿ ಸೂಪರ್‌ನೋವಾಸ್ ತಂಡ ಟ್ರೈಲ್‌ಬ್ಲೇಜರ್ಸ್‌ ಎದುರು ಸೋತರಷ್ಟೇ ವೆಲಾಸಿಟಿ ಫೈನಲ್ ಪ್ರವೇಶಿಸಲಿದೆ.
    ಟಾಸ್ ಜಯಿಸಿದ ಮೊದಲು ಬ್ಯಾಟಿಂಗ್ ಮಾಡಿದ ವೆಲಾಸಿಟಿ, ಅನುಭವಿ ವೇಗಿ ಜೂಲಾನ್ ಗೋಸ್ವಾಮಿ (13ಕ್ಕೆ 2), ಸೋಫೀ ಎಕ್ಸೆಲ್‌ಸ್ಟೋನ್ (9ಕ್ಕೆ 4) ಹಾಗೂ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ (13ಕ್ಕೆ 2) ಮೂವರ ಮಾರಕ ದಾಳಿಗೆ ನಲುಗಿ 15.1 ಓವರ್‌ಗಳಲ್ಲಿ 47 ರನ್ ಕಲೆಹಾಕಿತು. ಬಳಿಕ ಟ್ರೈಲ್‌ಬ್ಲೇಜರ್ಸ್‌ ತಂಡ ಡೀಯೆಂದ್ರ ಡೊಟಿನ್ (29*) ಬಿರುಸಿನ ಬ್ಯಾಟಿಂಗ್ ನೆರವಿನಿಂದ 7.5 ಓವರ್‌ಗಳಲ್ಲಿ 1 ವಿಕೆಟ್‌ಗೆ 49 ರನ್‌ಗಳಿಸಿ ಗೆಲುವಿನ ನಗೆ ಕಂಡಿತು. ವೆಲಾಸಿಟಿ ಪರ ಮೊದಲ ಪಂದ್ಯದಲ್ಲಿ ಗಮನಸೆಳೆದಿದ್ದ ಕನ್ನಡತಿ ವೇದಾ ಕೃಷ್ಣಮೂರ್ತಿ (0) ಶೂನ್ಯ ಸಂಪಾದಿಸಿದರೆ, ಮಿಥಾಲಿ ರಾಜ್ (1) ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಮೊದಲ ಪಂದ್ಯ ಗೆಲುವಿನ ರೂವಾರಿಗಳಾದ ಸನ್ ಲುಸ್ (4), ಸುಷ್ಮಾ ವರ್ಮ (1) ಹೀನಾಯ ನಿರ್ವಹಣೆ ತೋರಿದರು.

    ವೆಲಾಸಿಟಿ: 15.1 ಓವರ್‌ಗಳಲ್ಲಿ 47 (ಶಾಲಿ ವರ್ಮ 13, ಮಿಥಾಲಿ ರಾಜ್ 1, ವೇದಾ 0, ಸುಷ್ಮಾ ವರ್ಮ 1, ಶಿಖಾ ಪಾಂಡೆ 10, ಲೀಗ್ ಕ್ಯಾಸ್ಪರೆಕ್ 11, ಜೂಲಾನ್ ಗೋಸ್ವಾಮಿ 13ಕ್ಕೆ 2, ಸೋಫೀ ಎಕ್ಸೆಲ್‌ಸ್ಟೋನ್ 9ಕ್ಕೆ 4, ರಾಜೇಶ್ವರಿ ಗಾಯಕ್ವಾಡ್ 13ಕ್ಕೆ 2, ದೀಪ್ತಿ ಶರ್ಮ 8ಕ್ಕೆ 1), ಟ್ರೈಲ್‌ಬ್ಲೇಜರ್ಸ್‌: 7.5 ಓವರ್‌ಗಳಲ್ಲಿ 1 ವಿಕೆಟ್‌ಗೆ 49 (ಡೀಯೆಂದ್ರ ಡೊಟಿನ್ 29*, ಸ್ಮತಿ ಮಂದನಾ 6, ರೀಚಾ ಘೋಷ್ 12*, ಲೀಗ್ ಕ್ಯಾಸ್ಪರೆಕ್ 5ಕ್ಕೆ 1)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts